Dharani poster Release. ಮನೋಜ್ ಹುಟ್ಟುಹಬ್ಬಕ್ಕೆ ಬಂತು ಧರಣಿ ಕಲಾತ್ಮಕ ಪೋಸ್ಟರ್!

ಮನೋಜ್ ಹುಟ್ಟುಹಬ್ಬಕ್ಕೆ ಬಂತು ಧರಣಿ ಕಲಾತ್ಮಕ ಪೋಸ್ಟರ್!

  • * *
    ನೆಲದ ಕಥೆಯನ್ನೇ ಪ್ರಧಾನವಾಗಿರಿಸಿಕೊಂಡು ರೂಪುಗೊಳ್ಳುತ್ತಿರುವ ಸಿನಿಮಾ ಧರಣಿ. ಈ ಹಿಂದೆ ಅಪ್ಪಟ ಪ್ರೇಮಮಯ ಸಿನಿಮಾವನ್ನು ನಿರ್ದೇಶಿಸಿದ್ದ ಸುಧೀರ್ ಶ್ಯಾನುಭೋಗ್ ಈ ಸಲ ಪಕ್ಕಾ ಕಮರ್ಷಿಯಲ್ ಮಾಸ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ʻಧರಣಿʼ ಬರೋಬ್ಬರಿ ಐದು ಫೈಟ್ಗಳನ್ನು ಹೊಂದಿದೆ. ಈ ಐದೂ ಸಾಹಸ ಸನ್ನಿವೇಶಗಳು ಒಂದಕ್ಕಿಂತಾ ಒಂದು ಭಿನ್ನವಾಗಿವೆ.

ಮೇಲ್ನೋಟಕ್ಕೆ ಕೋಳಿ ಪಂದ್ಯದ ಸುತ್ತ ತೆರೆದುಕೊಳ್ಳುವ ಕಥೆ ಈ ಚಿತ್ರದಲ್ಲಿದ್ದರೂ, ಈ ವರೆಗೆ ಯಾರೂ ಹೇಳದ ಅನೇಕ ವಿಚಾರಗಳು ಅಡಕಗೊಂಡಿವೆ ಅನ್ನೋದು ನಿರ್ದೇಶಕ ಸುಧೀರ್ ಶ್ಯಾನುಭೋಗ್ ವಿವರಣೆ. ʻʻನನ್ನ ಮೊದಲ ಸಿನಿಮಾ ʻಅನಂತು ವರ್ಸಸ್ ನುಸ್ರತ್ʼ ಚಿತ್ರದಲ್ಲಿ ಒಂದು ಫೈಟ್ ಮಾತ್ರ ಇತ್ತು. ನನಗೆ ಅನವಶ್ಯಕವಾಗಿ ಫೈಟ್ ತುರುಕೋದರ ಬಗ್ಗೆ ನಂಬಿಕೆ ಇಲ್ಲ. ಧರಣಿ ಚಿತ್ರದಲ್ಲಿ ಐದು ಫೈಟ್ಗಳು ಇವೆ. ಆದರೆ ಇಲ್ಲಿ ಬರುವ ಪ್ರತಿಯೊಂದು ಸಾಹಸ ಸನ್ನಿವೇಶ ಕೂಡಾ ಕಥೆಗೆ ಪೂರಕವಾಗಿದೆ. ಮತ್ತು ಒಂದಕ್ಕಿಂತಾ ಒಂದು ಬೇರೆ ಫ್ಲೇವರಿನಲ್ಲಿವೆ. ಈ ಕುರಿತು ಪೂರ್ತಿ ವಿವರವನ್ನು ಮುಂದಿನ ದಿನಗಳಲ್ಲಿ ನೀಡುತ್ತೇನೆʼʼ ಎನ್ನುತ್ತಾರೆ ಸುಧೀರ್ ಶ್ಯಾನುಭೋಗ್. ಸದ್ಯ ನಾಯಕನಟ ಮನೋಜ್ ಅವರ ಹುಟ್ಟುಹಬ್ಬಕ್ಕೆ ʻಧರಣಿʼ ಸಿನಿಮಾದ ಕಲಾತ್ಮಕ ಪೋಸ್ಟರ್ ಬಿಡುಗಡೆಗೊಂಡಿದೆ. ರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದ ಟಿ.ಎಫ್. ಹಾದಿಮನಿ ಈ ಪೋಸ್ಟರನ್ನು ರಚಿಸಿದ್ದಾರೆ. ಒಂದು ಕಡೆ ಹೀರೋ ಮನೋಜ್, ಮತ್ತೊಂದು ಬದಿಯಲ್ಲಿ ಕಾಳಗಕ್ಕೆ ಅಣಿಯಾದ ಕೋಳಿಯನ್ನು ಹೊಂದಿರುವ ಈ ಪೋಸ್ಟರ್ ವಿನ್ಯಾಸ ಎಲ್ಲರ ಗಮನ ಸೆಳೆದಿದೆ.

ಎ ಕ್ಯೂಬ್ ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ ʻಧರಣಿʼ ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಮನೋಜ್ ಗೆ ನಾಯಕಿಯಾಗಿ ಹೊಸ ಪ್ರತಿಭೆ ರವೀಕ್ಷಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಸಂಪತ್ ಮೈತ್ರೇಯ, ಫ್ರೆಂಚ್ ಬಿರಿಯಾನಿ ಖ್ಯಾತಿಯ ಮಹಂತೇಶ್, ಸ್ಪಂದನಾ ಪ್ರಸಾದ್, ಸತ್ಯರಾಜ್ ಮೊದಲಾದವರ ತಾರಾಗಣವಿದೆ. ಇನ್ನೂ ಅನೇಕ ಪಾತ್ರಗಳು ಈ ಚಿತ್ರದಲ್ಲಿದ್ದು, ಹೆಸರಾಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಹಂತಹಂತವಾಗಿ ವಿಚಾರಗಳನ್ನು ಅನಾವರಣಗೊಳಿಸುವ ಉದ್ದೇಶ ಚಿತ್ರತಂಡದ್ದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor