Dali Dhananjaya acted Koti movie song released. ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾದ ಮೊದಲ ಹಾಡು ‘ಮಾತು ಸೋತು’ ಬಿಡುಗಡೆಯಾಗಿದೆ.

ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾದ ಮೊದಲ ಹಾಡು ‘ಮಾತು ಸೋತು’ ಈಗ ಬಿಡುಗಡೆಯಾಗಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ. ಕೋಟಿ ಸಿನಿಮಾದ ಹಾಡುಗಳ ಹಕ್ಕನ್ನು ಸರೆಗಮ ಖರೀದಿಸಿದ್ದು ಈ ಹಾಡಿನ ಲಿರಿಕಲ್ ವಿಡಿಯೋವನ್ನು ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ‌ ವೀಕ್ಷಿಸಬಹುದು.

ಹಾಡಿನ ಸಂಯೋಜಕರಾದ ವಾಸುಕಿ ವೈಭವ್ “ಇದು ನನ್ನ ಮತ್ತು ಅರ್ಮಾನ್ ಮಲಿಕ್ ಕಾಂಬಿನೇಷನ್ನಿನ ಮೊದಲ ಹಾಡು. ಸಾಹಿತ್ಯ ಯೋಗರಾಜ್ ಭಟ್ ಅವರದ್ದು. ಅವರ ಜತೆ ಕೆಲಸ ಮಾಡುವುದು ಯಾವಾಗಲೂ ಖುಷಿ ಮತ್ತು ಕಲಿಕೆಯ ವಿಚಾರ. ಜನರಿಗೆ ಖಂಡಿತ ಈ ಹಾಡು ಇಷ್ಟವಾಗತ್ತೆ‌ ಅನ್ನೊ ನಂಬಿಕೆ ಇದೆ” ಎಂದು ಹೇಳಿದರು.

“ವಾಸುಕಿ ಹೊಸ ತಲೆಮಾರಿನ ಪ್ರತಿಭಾವಂತ ಸಂಗೀತ ನಿರ್ದೇಶಕ. ಯೋಗರಾಜ್ ಭಟ್ ಅವರ ಸಾಹಿತ್ಯದ ದೊಡ್ಡ ಅಭಿಮಾನಿ ನಾನು. ಈ ಇಬ್ಬರ ಕಾಂಬಿನೇಷನ್ನಿನ ಈ ಹಾಡನ್ನು ಅರ್ಮಾನ್ ಮಲಿಕ್ ತುಂಬಾ ಚೆನ್ನಾಗಿ ಹಾಡಿದ್ದಾರೆ. ಈ ಹಾಡು ಕನ್ನಡದ ಕಿವಿ ಮತ್ತು ಮನಸುಗಳಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಕೋಟಿಯ ನಿರ್ದೇಶಕ ‘ಪರಮ್’ ಅಭಿಪ್ರಾಯ ಪಟ್ಟರು.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್‌ ಇಂದಿರಾ, ತಾರಾ, ಸರ್ದಾರ್‌ ಸತ್ಯ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಚಾರ್ಲಿ 777 ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor