Chakna movie teaser released. ಬೂದಿಯೊಳಗಿನ ಕೆಂಡಗಳ ಸತ್ಯ ಘಟನೆಗಳ ಚಾಕ್ನ ಟೀಸರ್ ಬಿಡುಗಡೆ.
ಸತ್ಯ ಘಟನೆಗಳ ಚಾಕ್ನ
ಚಂದನವನದಲ್ಲಿ ಪ್ರಸಕ್ತ ಸತ್ಯ ಘಟನೆಗಳ ಸಿನಿಮಾಗಳನ್ನು ಜನರು ಇಷ್ಟಪಡುತ್ತಿರುವುದರಿಂದ ಅಂತಹುದೆ ಕಥೆಗಳು ತೆರೆ ಮೇಲೆ ಬರುತ್ತಿವೆ. ಆ ಸಾಲಿಗೆ ’ಚಾಕ್ನ’ ಚಿತ್ರ ಸೇರ್ಪಡೆಯಾಗಿದೆ. ’ಬೂದಿಯೊಳಗಿನ ಕೆಂಡಗಳ ಕಥೆ’ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. ಆರ್‌ಆರ್ ಕಂಬೈನ್ಸ್ ಅಡಿಯಲ್ಲಿ ವಿಮಲಾ ನಿರ್ಮಾಣ ಮಾಡುತ್ತಿದ್ದಾರೆ. ತಮಿಳಿನಲ್ಲಿ ಐದು ಚಿತ್ರಗಳ ನಿರ್ದೇಶನ, ’ಜನಕ’ದಲ್ಲಿ ಖಳನಾಗಿ ಅಭಿನಯಿಸಿರುವ ಕನ್ನಡಿಗ ಕೆ.ಪಳನಿ ರಚನೆ,ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಪ್ರಚಾರದ ಮೊದಲ ಹಂತವಾಗಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್‌ನ್ನು ’ಜಂಬದ ಹುಡುಗಿ’ ಖ್ಯಾತಿಯ ಪ್ರಿಯಾಹಾಸನ್ ಅನಾವರಣಗೊಳಿಸಿದರು. ನಂತರ ಮಾತಾನಾಡುತ್ತಾ ಸಿನಿಮಾದಲ್ಲಿ ಪಾಸಿಟೀವ್, ನೆಗಟೀವ್ ಅಂಶಗಳನ್ನು ತೋರಿಸಿದರೆ ಸಮಾಜದ ಮೇಲೆ ತುಂಬ ಪರಿಣಾಮ ಬೀರುತ್ತದೆ. ನಾವುಗಳು ಒಳ್ಳೆ ಸಂದೇಶವನ್ನು ಹೇಳಿದಾಗ ಮಾತ್ರ ಸಮಾಜ, ಸುತ್ತಮುತ್ತ ಇರೋರಿಗೆ ಅನುಕೂಲ ಆಗುತ್ತದೆ. ನೀವುಗಳು ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ದೀರಾ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ಸಂತಸ ತಂದಿದೆ. ಇದರಿಂದ ಉದ್ಯಮವು ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ನಿರ್ದೇಶಕರು ಹೇಳುವಂತೆ, ಒಳ್ಳೇದು ಮಾಡಿದ್ರೆ ದೇವರು ಕಾಯ್ತಾನೆ. ಕೆಟ್ಟದ್ದನ್ನು ಮಾಡಿದಾಗ ಯಮನೇ ಶಿಕ್ಷೆ ಕೊಡಲು ಮುಂದೆ ಬರ‍್ತಾನೆ. ಆರು ತಿಂಗಳ ಹಿಂದೆ ಪಾಂಡಿಚೇರಿಯಲ್ಲಿ ನಡೆದಂತ ಘೋರ ಘಟನೆ ಹಾಗೂ ನಾನು ಕಣ್ಣಾರೆ ಕಂಡಂತ ಕಟುಸತ್ಯಗಳನ್ನು ಆಯ್ಕೆ ಮಾಡಿಕೊಂಡು ಅದನ್ನು ಚಿತ್ರರೂಪಕ್ಕೆ ತರುತ್ತಿದ್ದೇನೆ. ಗಾಂಜಾ ಸೇದುವ, ಕುಡುಕ, ಕಳ್ಳ, ಅತ್ಯಾಚಾರಿ ಹೀಗೆ ನಾಲ್ಕು ನಕರಾತ್ಮಕ ಪಾತ್ರಗಳು ಒಂದಡೆ ಸೇರಿದರೆ ಏನಾಗುತ್ತದೆ. ಚಾಕ್ನ ಅಂಗಡಿ ಮಾಲೀಕನ ಕುಟುಂಬದಲ್ಲಿ ನಡೆಯುವ ಸನ್ನಿವೇಶಗಳು. ಪರಿಸ್ಥಿತಿ ಸಂದರ್ಭಗಳ ಮೇಲೆ ಮನುಷ್ಯ ಬದಲಾವಣೆ ಆಗದಿದ್ರೆ ಯಾವ ರೀತಿ ಮಾರಕ ಆಗುತ್ತಾನೆ. ಕ್ರೈಂ ಅನ್ನೋದು ರಕ್ತ ಬೀಜಾಕ್ಷರ ಇದ್ದಂತೆ. ಅದನ್ನು ಮಾಡಿದವರಿಗೆ ದಂಡನೆ ಕೊಡಬೇಕು. ಮುಂದೆ ಬೇರೆಯವರು ಇಂತಹದನ್ನು ಮಾಡಲು ಭಯಪಡಬೇಕು ಎನ್ನುವಂತ ಶಿಕ್ಷೆ ನೀಡಿದಾಗ ಮಾತ್ರ ಅಪರಾಧಗಳು ಕಡಿಮೆಯಾಗುತ್ತದೆ.

ಗ್ರಾಫಿಕ್ಸ್ ಬಳಸದೆ, ಕಲಾವಿದರುಗಳಿಗೆ ಮೇಕಪ್ ಹಾಕದೆ, ನೈಜ ಸ್ಥಳಗಳಲ್ಲಿ ರಾ ಮಾದರಿಯಲ್ಲಿ ಶೂಟಿಂಗ್ ಮಾಡುತ್ತಿರುವುದು ವಿಶೇಷ. ಒಂದು ಮಹತ್ವದ ಪಾತ್ರಕ್ಕೆ ’ಭೀಮ’ ಖ್ಯಾತಿ ಡ್ರ್ಯಾಗನ್ ಮಂಜು ನಟಿಸುವ ಸಾಧ್ಯತೆ ಇದೆ. ಮಶಾಣದಲ್ಲಿ ಬರುವ ದೃಶ್ಯದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಮಿಕ್ಕಂತೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದೆಂದು ಸಣ್ಣ ಪ್ರಮಾಣದ ಮಾಹಿತಿಯನ್ನು ತೆರೆದಿಟ್ಟರು.

ತಾರಾಗಣದಲ್ಲಿ ಕಾಕ್ರೋಚ್ ಸುಧಿ, ಗಿರಿ, ಮಧುಶ್ರೀ ಕಾಲ್ಮಟ್, ಶ್ರೀಕುಮಾರ್, ಸುರೇಶ್‌ಬಾಬು, ಸತ್ಯನ್, ವೈ.ವಿ.ಕೃಷ್ಣಪ್ಪ, ವೆಂಕಟೇಶ್, ಮೂರ್ತಿಭೀಮರಾಜನ್, ರವಿ,ಸುನಿಲ್‌ಕುಮಾರ್, ಕರ್ಣಪ್ರಭು, ವೇಣುಗೋಪಾಲ್, ಮುನಿಸ್ವಾಮಿ, ಅಣ್ಣಾದೊರೈ, ಮೋಹನ್, ವಿಜಯ್‌ಜಗ್ಗಿ, ಎಸ್.ವೇಲು, ಗಂಗ, ಸುಧಾ, ಮಮತ, ಸುನಿತಾ, ಇಂದ್ರ ನಟಿಸುತ್ತಿದ್ದಾರೆ.

ಸಂಗೀತ ಕಲ್ಕಿ ಅಭಿಷೇಕ್, ಛಾಯಾಗ್ರಹಣ ರಣಧೀರ ನಾಯಕ್, ಸಂಭಾಷಣೆ ರಾಘವ್ ಮಹರ್ಷಿ, ನೃತ್ಯ ಆಕಾಶ್ ಶೇಷಾದ್ರಿ, ಸಾಹಿತ್ಯ ಕವಿಕುಮಾರ್ ಅವರದಾಗಿದೆ. ಸದ್ಯದಲ್ಲೆ ಚಿತ್ರೀಕರಣ ಶುರು ಮಾಡಲು ತಂಡವು ಯೋಜನೆ ರೂಪಿಸಿಕೊಂಡಿದೆ.