Bhuvanam gaganam movie review. ಭುವನಂ ಗಗನಂ ಚಿತ್ರ ವಿಮರ್ಶೆ. “ಭುವನ ಗಗನಗಳ ನಡುವೆ ಪ್ರೀತಿಯ ಬೆಸುಗೆ”
ಚಿತ್ರ ವಿಮರ್ಶೆ – ಭುವನಂ ಗಗನಂ
Rating – 3/5.
ಚಿತ್ರ: ಭುವನಂ ಗಗನಂ
ನಿರ್ಮಾಣ: ಮುನೇಗೌಡ
ನಿರ್ದೇಶನ: ಗಿರೀಶ್ ಮೂಲಿಮನಿ
ಸಂಗೀತ : ಗುಮ್ಮಿನೇನಿ ವಿಜಯ್ ಬಾಬು
ಛಾಯಾಗ್ರಹಣ : ಉದಯ್ ಲೀಲಾ
ಸಂಕಲನ : ಸುನೀಲ್ ಕಶ್ಯಪ್ H.N.
ತಾರಾಗಣ : ಪ್ರಮೋದ್, ಪೃಥ್ವಿ ಅಂಬಾರ್, ರೇಚೆಲ್ ಡೇವಿಡ್, ಅಶ್ವತ್ಥಿ, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಕೆ.ಎಸ್. ಶ್ರೀಧರ್, ಪ್ರಕಾಶ್ ತುಂಬಿನಾಡು, ಮುಂತಾದವರು.

ಪ್ರೀತಿ, ಪ್ರೇಮದ ಕಥಾವಸ್ತುವನ್ನು ಇಟ್ಟುಕೊಂಡು ಶತಮಾನಗಳಿಂದ ಕಥೆಗಳು ಹುಟ್ಟುಕೊಂಡಿವೆ, ಇನ್ನೂ ಹುಟ್ಟತ್ತಲೇ ಇರುತ್ತವೆ.
ಫೆಭ್ರವರಿ 14 ವ್ಯಾಲೆಂಟೈನ್ಸ್ ಡೇ ಅಮಲಿನಲ್ಲಿ ತೇಲುವ, ತೇಲಾಡುವ ಉತ್ಸುಕಥೆಯಲ್ಲಿರುವ ಜೋಡಿಗಳಿಗೆ
ನಿಜವಾದ ಪ್ರೀತಿ ಹೇಗಿರುತ್ತದೆ ಎಂಬುದನ್ನು ನಿರ್ದೇಶಕ ಗಿರೀಶ್ ಮೂಲಿಮನಿ ಅವರು ತಮ್ಮದೇ ರೀತಿಯಲ್ಲಿ ನಿರೂಪಿಸಿದ್ದಾರೆ.

ಇಂದು ಪ್ರೀತಿ ಅಂದರೆ ಕಾಮದ ಪರಾಕಾಷ್ಟೆಯ ಮಲಿನದಲ್ಲಿ ಮುಳುಗುವುದು ಅಂದುಕೊಂಡ ಕೆಲವು ಯುವ ಜೋಡಿಗಳಿಗೆ ಪ್ರೀತಿಯ ಪಾವಿತ್ರತೆಯನ್ನು ಚಿತ್ರದಲ್ಲಿ ಕಾಣಬಹುದು.
ನೋಡಿದ ತಕ್ಷಣ ಹುಟ್ಟುವ ಪ್ರೀತಿಗೂ, ಹಲವಾರು ದಿನಗಳ ಒಡನಾಟದಿಂದ ಒಬ್ಬರಿಗೊಬ್ಬರು ಅರ್ಥೈಸಿಕೊಂಡ ನಂತರ ಹುಟ್ಟಿದ ಪ್ರೀತಿಯ ಪ್ರಾಮಾಣಿಕಥೆಯ ಎರಡು ಮಜಲುಗಳ
ಲವ್ ಸ್ಟೋರಿಯನ್ನು ‘ಭುವನಂ ಗಗನಂ’ ಸಿನಿಮಾದಲ್ಲಿ ತೋರಿಸಲಾಗಿದೆ.

ಪ್ರೀತಿ ಮಾಡೋದು ಇಷ್ಟ, ಆದರೆ ಮದುವೆಯಾದ ನಂತರ ಬರುವ ಹಲವಾರು ಸಮಸ್ಯೆಗಳ ನಡುವೆ ಪ್ರೀತಿಯನ್ನು ಉಳಿಸಿಕೊಂಡು ಒಟ್ಟಿಗೆ ಜೀವಿಸೋದು ಎಷ್ಟು ಕಷ್ಟ
ಎನ್ನುವುದನ್ನು ನಿರ್ದೇಶಕ ಮೂಲಿಮನಿ ‘ಭುವನಂ ಗಗನಂ’ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ.
ಎರಡು ಬೇರೆ ಬೇರೆ ಕಥೆಯನ್ನು ‘ಭುವನಂ ಗಗನಂ’ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ಒಂದು ಕಥೆಯಲ್ಲಿ ಪೃಥ್ವಿ ಅಂಬಾರ್ ಹಾಗೂ ಅಶ್ವತಿ ಅವರು ಜೋಡಿಯಾಗಿ ನಟಿದ್ದಾರೆ.
ಮತ್ತೊಂದು ಕಥೆಯಲ್ಲಿ ಪ್ರಮೋದ್ ಮತ್ತು ರೇಚಲ್ ಡೇವಿಡ್ ಅವರು ಜೋತೆಯಾಗಿದ್ದಾರೆ.

ಈ ಎರಡೂ ಕಥೆಗಳು ಬೇರೆ ಬೇರೆ ಆಗಿದ್ದರೂ ಅವುಗಳ ವ್ಯಾಖ್ಯಾನದ ಒಳ ತಿರುಳು ಪ್ರೀತಿ, ಪ್ರೀತಿ, ಪ್ರೀತಿಯಾಗಿದೆ.
ಈ ಎರಡು ಕಥೆ, ಮತ್ತು ವ್ಯಕ್ತಿಗಳ, ಭಾವನೆಗಳು, ತುಡಿತಗಳು, ತುಮುಲಗಳು, ಭವಣೆಗಳು ವಿಭಿನ್ನವಾದರೂ ಕಥೆಯ ಓಟದ ಪಯಣದ ಯಾವುದೋ ಒಂದು ಸಂದರ್ಭದಲ್ಲಿ ಈ ಎರಡು ಕಥೆಗಳು ಒಟ್ಟಿಗೆ ಸೇರುತ್ತವೆ.
ಆದೇ ಭುವನಂ ಗಗನಂ ( ಭೂಮಿ, ಗಗನ) ಎರಡು ಒಟ್ಟಿಗೆ ಸೇರಿದಾಗ ಏನಾಗುತ್ತದೆ.? ಅನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕಾಗುತ್ತದೆ.
ರಾಮ್ ಪಾತ್ರದಲ್ಲಿ ಪೃಥ್ವಿ ಅಂಬರ್ ಅಭಿನಯ ಗಮನ ಸೆಳೆಯುತ್ತದೆ. ಪೃಥ್ವಿ ಅಂಬರ್ ಈ ವರೆಗೂ ಮಾಡಿರುವ ಪಾತ್ರಗಳು ಒಂದೊಂದು ವಿಭಿನ್ನ ಹಾಗೂ ಗಮನಾರ್ಹ ಎನ್ನುವುದು ಸಾಭೀತಾಗಿದೆ.

ಇಲ್ಲಿ ಪೃಥ್ವಿ ತುಂಬಾ ಚಾಲೆಂಜಿಂಗ್ ಆದ ಬುದ್ದಿ ಮಾಂದ್ಯನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ, ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.
ಹಾಗೆಯೇ ಪೃಥ್ವಿಗೆ ಜೋಡಿಯಾಗಿ ನಟಿ ಅಶ್ವತಿ ಅವರು ತೆರೆಯ ಮೇಲೆ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರು ಪ್ರೇಕ್ಷಕರ ಗಮನ ಸೆಳೆಯುತ್ತಾರೆ.

ಇನ್ನು ನಟ ಪ್ರಮೋದ್ ಈಗಾಗಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನದಲ್ಲಿ ನೆನಪಾಗುವ ಪಾತ್ರಗಳನ್ನು ನಿಭಾಯಿಸಿದ್ದಾರೆ.
ಈ ಸಿನಿಮಾದ ಕಥೆಯಲ್ಲಿ ರಫ್ ಅಂಡ್ ಟಫ್ ಆದ ಒರಟು ಸ್ವಭಾವದ, ನೇರ ನಡೆ, ನುಡಿಯ ಯುವ ಪ್ರೇಮಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ಆಕ್ಷನ್ ದೃಶ್ಯಗಳನ್ನು ನಿಭಾಯಿಸಿದ್ದಾರೆ. ಪ್ರಮೋದ್ ಜೋಡಿಯಾಗಿ ರೇಚಲ್ ಡೇವಿಡ್ ಜೊತೆಯಾಗಿದ್ದಾರೆ. ಈ ಇಬ್ಬರ ಜೋಡಿ ಚೆನ್ನಾಗಿದೆ.

ಶರತ್ ಲೋಹಿತಾಶ್ವ ಹಾಗೂ ಅಚ್ಯುತ್ ಕುಮಾರ್, ಕೆ.ಎಸ್. ಶ್ರೀಧರ್, ಪ್ರಕಾಶ್ ತುಂಬಿನಾಡು, ಇವರುಗಳ ಅಭಿನಯ ಈ ಚಿತ್ರಕ್ಕೆ ಮತ್ತಷ್ಟು ಮೆರಗನ್ನು ತಂದುಕೊಟ್ಟಿದೆ.
ಚಿತ್ರದ ಮೊದಲರ್ಧ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದರು ದ್ವಿತೀಯಾರ್ಧದ ಕೊನೆಯ 20 ನಿಮಿಷ ಪ್ರೇಕ್ಷಕರನ್ನು ಎಮೋಷನಲ್ ಆಗಿ ಕಟ್ಟಿಹಾಕುತ್ತದೆ.

ಗುಮ್ಮಿನೇನಿ ವಿಜಯ್ ಬಾಬು ರವರ ಸಂಗೀತ, ಚಿತ್ರದ ಜೊತೆ ಜೊತೆಗೆ ಸಾಗುತ್ತಾ ಕಥೆಯ ಓಟಕ್ಕೆ ಸಾಥ್ ನೀಡಿದರೆ,
ಉದಯ್ ಲೀಲಾ ರವರ ಛಾಯಾಗ್ರಹಣದ ನೋಟ ಆಚ್ಚುಕಟ್ಟಾದ ಫ್ರೇಮ್ ಹಾಕಿದಂತಿದೆ.

ಒಟ್ಟಾರೆ ಒಂದು ಒಳ್ಳೆಯ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಕಥೆ, ಕಲಾವಿದರು, ನಿರ್ದೇಶಕ ಎಷ್ಟು ಮುಖ್ಯವೋ ಹಾಗೆಯೇ ನಿರ್ಮಾಪಕ ಅತೀ ಮುಖ್ಯವಾಗುತ್ತಾರೆ. ನಿರ್ಮಾಪಕರಾದ ಮುನೇಗೌಡ ಧಾರಾಳವಾಗಿ ಹಣ ವ್ಯಯಿಸಿ ಮೊದಲ ಬಾರಿಗೆ ಒಂದು ಪ್ರೇಮ ಕಥೆಯನ್ನು ಪ್ರೇಕ್ಷಕ ಪ್ರಭುಗಳ ತೆಕ್ಕೆಗೆ ಒಪ್ಪಿಸಿದ್ದಾರೆ.
ಇನ್ನು ಪ್ರೇಕ್ಷಕರು ಈ ಸಿನಿಮಾದ ಕೈಹಿಡಿದು ಗೆಲ್ಲಿಸಬೇಕು ಎಂಬುದು ನಮ್ಮ ಆಶಯ.