Bhairati Ranagal ಶಿವರಾಜ್ ಕುಮಾರ್ ಅಭಿನಯದ “ಭೈರತಿ ರಣಗಲ್” ಚಿತ್ರಕ್ಕೆ ಚಾಲನೆ

“ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಶಿವರಾಜಕುಮಾರ್ ಅಭಿನಯದ “ಭೈರತಿ ರಣಗಲ್” ಚಿತ್ರಕ್ಕೆ ಚಾಲನೆ”

ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಅವರು ನಿರ್ಮಿಸುತ್ತಿರುವ, ನರ್ತನ್ ನಿರ್ದೇಶನದ, ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ “ಭೈರತಿ ರಣಗಲ್” ಚಿತ್ರದ ಮುಹೂರ್ತ ಸಮಾರಂಭ ಗವಿಪುರದ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ್ದರು.

“ಮಫ್ತಿ” ಚಿತ್ರದ ಶಿವರಾಜಕುಮಾರ್ ಅವರ ಭೈರತಿ ರಣಗಲ್ ಪಾತ್ರ ಇನ್ನು ಎಲ್ಲರ ಮನದಲ್ಲಿದೆ. ಆ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಈ ಚಿತ್ರದ ಕಥೆ ಮಾಡಲಾಗಿದೆ. ಇದು “ಮಫ್ತಿ” ಚಿತ್ರದ ಪ್ರೀಕ್ವೆಲ್. “ಮಫ್ತಿ” ಚಿತ್ರದಲ್ಲಿ ಮಧ್ಯಾಂತರದ ನಂತರ ಈ ಪಾತ್ರ ಬರುತ್ತದೆ. ಇಲ್ಲಿ ಭೈರತಿ ರಣಗಲ್ ಆಗಿದ್ದು ಹೇಗೆ ಎಂದು ತಿಳಿಯುತ್ತದೆ. ಶಿವರಾಜಕುಮಾರ್ ಅವರು ಈ ಚಿತ್ರದ ನಾಯಕರಾಗಲು ಒಪ್ಪಿರುವುದು ಹಾಗೂ ಗೀತಾ ಶಿವರಾಜಕುಮಾರ್ ಅವರು ನಿರ್ಮಾಣ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ರವಿ‌ ಬಸ್ರೂರ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಅವರ ಛಾಯಾಗ್ರಹಣ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಇಂದು ಮುಹೂರ್ತ ನೆರವೇರಿದೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ನಿರ್ದೇಶಕ ನರ್ತನ್ ತಿಳಿಸಿದರು.

“ಮಫ್ತಿ” ಚಿತ್ರದ ಭೈರತಿ ರಣಗಲ್ ನನಗೆ ಇಷ್ಟವಾದ ಪಾತ್ರ. ಈ ಚಿತ್ರವನ್ನು ನಮ್ಮ ಸಂಸ್ಥೆಯಿಂದ ನಿರ್ಮಾಣ ಮಾಡುತ್ತಿದ್ದೇವೆ. ಚಿತ್ರದ ಪ್ರಾರಂಭಕ್ಕೆ ಸಮಯ ಈಗ ಕೂಡಿ ಬಂದಿದೆ. “ಮಫ್ತಿ” ಬಂದು ಆರು ವರ್ಷಗಳಾಗಿದೆ. ಈಗಲೂ ನಾನು ಹಾಗೆ ಇದ್ದೀನಿ. ಹಾಗಾಗಿ ಈ ಪಾತ್ರ ಮಾಡಲು ಅನುಕೂಲವಾಗುತ್ತದೆ. ಪ್ರೀಕ್ವೆಲ್ ಆಗಿರುವುದರಿಂದ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತೇನೆ. ನರ್ತನ್ ಕಥೆ ಚಿನ್ನಾಗಿ ಮಾಡಿಕೊಂಡಿದ್ದಾರೆ ಎಂದರು ನಾಯಕ ಶಿವರಾಜಕುಮಾರ್.

“ಭೈರತಿ ರಣಗಲ್” ಚಿತ್ರವನ್ನು ನಮ್ಮ ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡಬೇಕೆಂದು ಮೊದಲೆ ನಿರ್ಧಾರವಾಗಿತ್ತು. ಈಗ ಚಿತ್ರ ಆರಂಭವಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕಿ ಗೀತಾ ಶಿವರಾಜಕುಮಾರ್.

ನಿವೇದಿತಾ ಶಿವರಾಜಕುಮಾರ್, ಕೆ.ಪಿ.ಶ್ರೀಕಾಂತ್, ಛಾಯಾಗ್ರಹಕ ನವೀನ್ ಕುಮಾರ್ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor