Bhairadevi movie review ಗೋರಿ, ಅಘೋರಿಗಳ ನಡುವೆ, ಆತ್ಮ ಪರಮಾತ್ಮಗಳ ಪಯಣ.
ಚಿತ್ರ: ಭೈರಾದೇವಿ
ಚಿತ್ರ ವಿಮರ್ಶೆ
ರೇಟಿಂಗ್ – 3.5/5
ನಿರ್ಮಾಪಕರು : ರಾಧಿಕಾ ಕುಮಾರಸ್ವಾಮಿ, ರವಿರಾಜ್
ನಿರ್ದೇಶನ: ಶ್ರೀಜೈ
ಸಂಗೀತ : ಕೆ.ಕೆ. ಸೆಂಥಿಲ್ ಪ್ರಸಾದ್
ಛಾಯಾಗ್ರಹಣ : ಜಿ.ಎಸ್. ವಾಲಿ
ತಾರಾಗಣ: ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್, ಶಿವರಾಮ್, ರಂಗಾಯಣ ರಘು, ರವಿಶಂಕರ್ ಮೊದಲಾದವರು ಅಭಿನಯಿಸಿದ್ದಾರೆ.
ಭೈರಾದೇವಿ ಚಿತ್ರ ವಿಮರ್ಶೆ
ರೇಟಿಂಗ್ – 3.5/5
ಗೋರಿ, ಅಘೋರಿಗಳ ನಡುವೆ
ಆತ್ಮ ಪರಮಾತ್ಮಗಳ
ಮೈ ಜುಮ್ಮೆನ್ನಿಸುವ ದೃಶ್ಯಗಳ ಪಯಣ.
ಬೈರಾದೇವಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಪ್ತವಾರ್ಷಿಕ ಯೋಜನೆ ಅಂತೂ ಇಂತೂ ತೆರೆಗೆ ಬಂದಿದೆ ಎನ್ನುವುದು ಖುಷಿಯ ವಿಚಾರ.
ರಾಧಿಕಾ ಈಡೀ ಚಿತ್ರವನ್ನು ಆವರಿಸಿಕೊಂಡು ಚಿತ್ರಕ್ಕೆ ಅದ್ಬುತ ಆಯಾಮವನ್ನು ಕಟ್ಟಿಕೊಟ್ಟಿದ್ದಾರೆ.
ಪ್ರೀತಿ, ಪ್ರೇಮ, ಪ್ರೇಯಸಿ, ತಂಗಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ರಾಧಿಕಾ ಮೊದಲಬಾರಿಗೆ ಅಘೋರಿಯಂತಹ ವಿಭಿನ್ನವಾದ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರು ಆಶ್ಚರ್ಯದಿಂದ ಹುಬ್ಬೇರಿಸುವಂತೆ ಮಾಡಿದ್ದಾರೆ.

ಸುಂದರಿ ರಾಧಿಕಾರ ಸ್ನಿಗ್ಧ ಸೌಂದರ್ಯವನ್ನು ಮತ್ತಷ್ಟು ಸುಂದರ ಗೊಳಿಸಿರುವುದು, ಪ್ರೇಕ್ಷಕರ ಎದೆಯಲ್ಲಿ ದೇವರು ಕೊಟ್ಟ ತಂಗಿ ಈಗ ಕಾಳಿದೇವಿಯಾಗಿ, ಕಾಲೇಜಿನ ಅಧ್ಯಾಪಕಿಯಾಗಿ ಚಲುವು ಮಾಸದ ಅಭಿನಯದೊಂದಿಗೆ ತೆರೆ ಮೇಲೆ ಬಂದಿರುವುದು ವಿಸ್ಮಯ ಮೂಡಿಸುತ್ತದೆ.
ರಾಧಿಕಾ ಕುಮಾರಸ್ವಾಮಿ ಯವರಿಗೆ ಭೈರಾದೇವಿಯ ಪಾತ್ರ ನಿಜಕ್ಕೂ ಕಠಿಣವಾದದ್ದೂ ಆದರೂ ಧೈರ್ಯವಾಗಿ ನಿಭಾಯಿಸಿದ್ದಾರೆ. ಒಂದು ಕಡೆ ಕಾಲೇಜಿನ ಹುಡುಗರ ಬಾಯಲ್ಲಿ ನೀರೂರಿಸುವ ಸುಂದರಿಯಾದರೆ ಮತ್ತೊಂದೆಡೆ ಶವದ ಮಾಂಸವನ್ನು ಬಾಯಲ್ಲಿ ಕಚ್ಚಿ ತಿನ್ನುವ ಅಘೋರಿಯಾಗಿ ಎರಡೂ ಪಾತ್ರಗಳಿಗೆ ಪರಿಪೂರ್ಣ ನ್ಯಾಯ ಒದಗಿಸಿದ್ದಾರೆ. ಬಹುಶಃ ಒಬ್ಬ ನಾಯಕಿ ನಟಿ ಅಘೋರಿಯಾಗಿ ಪರಿ ಪೂರ್ಣವಾಗಿ ನಟಿಸಿರುವುದು ರಾಧಿಕಾ ಕುಮಾರಸ್ವಾಮಿ ಮೊದಲಿಗರು ಎನ್ನುವುದು ಹೆಮ್ಮೆಯ ವಿಷಯ

ಇನ್ನು ಮತ್ತೊಬ್ಬ ಬಣ್ಣದ ಒಲವು, ಮುಖದ ಚಲುವು ಮಾಸದ ಸುಂದರ, ಸಜ್ಜನಿಕೆಯ ನಟ ರಮೇಶ್ ಅರವಿಂದ್ 1997ನೇ ವರ್ಷದ ನಂತರ ಸುಮಾರು 27 ವರ್ಷಗಳ ನಂತರ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಅಬ್ಬರಿಸಿದ್ದಾರೆ, ಪ್ರೇಕ್ಷಕರಿಗೆ ಶಾಕ್ ನೀಡುವಂತೆ ತೆರೆಯ ಮೇಲೆ ರಾರಾಜಿಸಿದ್ದಾರೆ.
ಇತ್ತೀಚಿಗೆ ರಮೇಶ್ ಅರವಿಂದ್ ರವರ ಮೈಮೇಲೆ ಪೋಲಿಸ್ ಧಿರಿಸು ಯಶಸ್ಸಿನ ಕಡೆ ಕರೆದೊಯ್ಯುತ್ತಿದೆ.
ಈ ಚಿತ್ರದ ಪಾತ್ರವೂ ಕೂಡ ಭೈರಾದೇವಿಗೆ ಪೈಪೋಟಿ ನೀಡುವಂತ ಪಾತ್ರ. ಇಂದುನ ಯುವ ಜನತೆಗೆ ರಮೇಶ್ ರವರ ಅಭಿನಯದ ಮತ್ತೊಂದು ಮಜಲನ್ನು ನೋಡುವ ಅವಕಾಶವನ್ನು ನಿರ್ದೇಶಕ ಶ್ರೀಜೈ ಕಲ್ಪಿಸಿದ್ದಾರೆ.

25 ವರ್ಷಗಳಿಂದ ಅಭಿನಯದ ಮೂಲಕ ಪ್ರೇಕ್ಷಕರ ಹೃದಯದಲ್ಲಿ ಚಾಲ್ತಿಯಲ್ಲಿರುವ ಅಭಿನಯದಲ್ಲೂ , ತನ್ನ ನಗುವಿನ ಸೌಂದರ್ಯದಲ್ಲೂ ಮನ ಸೆಳೆಯುವ ಮತ್ತೊಬ್ಬ ಸಹಜ ನಟಿ ಎಂದರೆ ಅದು ಅನು ಪ್ರಭಾಕರ್.
ರಮೇಶ್ ಅರವಿಂದ್ ಹೆಂಡತಿಯಾಗಿ, ರಾಧಿಕಾ ಅಕ್ಕಳಾಗಿ, ಮಗುವಿನ ತಾಯಿಯಾಗಿ ಅನು ಲವಲವಿಕೆಯಿಂದ ತೆರೆಯ ಮೇಲೆ ಕಾಣಿಸಿದ್ದಾರೆ. ಗೃಹಿಣಿ ಪಾತ್ರದಲ್ಲಿ ನಡೆವ ಒಂದಷ್ಟು ನಿಗೂಡ ಸತ್ಯಗಳಿಗೆ, ಗೋಮುಖ ವ್ಯಾಘ್ರಕ್ಕೆ ಆಹಾರವಾಗುವ ಪಾತ್ರವನ್ನು ಬಹಳ ಚನ್ನಾಗಿ ನಿಭಾಯಿಸುದ್ದಾರೆ.
ಅರವಿಂದ್ ನ ಸಹಾಯಕ ಪೋಲಿಸ್ ಆಗಿ ರಂಗಾಯಣ ರಘು ಬೆಂಗಳೂರಿನಿಂದ ಕಾಶಿಯ ಕಾಡಿನವರೆಗೂ ಅಲೆದಾಡಿದ್ದಾರೆ. ಕಾಡಿನ ಕಡಿದಾದ ಇಕ್ಕೆಲಗಳಲ್ಲಿ ಹಾಸ್ಯವನ್ನು ಹರಿಸಿದ್ದಾರೆ. ಭಯ ಮಿಶ್ರಿತ ಹಾಸ್ಯವನ್ನು ಪ್ರೇಕ್ಷಕರಿಗೆ ಉಣ ಬಡಿಸಿದ್ದಾರೆ. ಆದರೆ ನಿರ್ದೇಶಕರು ಈ ಪಾತ್ರವನ್ನು ಇನ್ನಷ್ಟು ಚನ್ನಾಗಿ ಬಿಂಬಿಸಬಹುದಿತ್ತು ಅನ್ನಿಸುತ್ತದೆ. ರಂಗಾಯಣ ರಘುರವರ ಹಾಸ್ಯಕ್ಕೆ ಮತ್ತಷ್ಟು ಮೆರಗು ಬೇಕಿತ್ತು ಅನ್ನುವುದಂತು ನಿಜ.

ಕಿರುತೆರೆಯ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ನಟ ಸ್ಕಂದ ಒಂದೆರಡು ಚಿತ್ರಗಳ ನಂತರ ಕಾಣೆಯಾಗಿದ್ದರು. ಈಗ ಭೈರಾದೇವಿ ಚಿತ್ರದಲ್ಲಿ ಕಾಲೇಜ್ ವಿಧ್ಯಾರ್ಥಿಯಾಗಿ ಪ್ರತ್ಯಕ್ಷವಾಗಿದ್ದಾರೆ. ಅವರು ಪಾತ್ರ ಚನ್ನಾಗಿ ನಿಭಾಯಿಸಿದ್ದಾರೆ, ಆದರೆ ರಾಧಿಕಾ ಮುಂದೆ ತುಂಬಾ ಡಲ್ಲಾಗಿ ಕಾಣುತ್ತಾರೆ. ಪಾಠ ಮಾಡುವ ಅಧ್ಯಾಪಕಿಯನ್ನು ಪ್ರೇಮಿಸುವ ಪ್ರೇಮಿಯಾಗಿ ಸ್ಕಂದ ಪಾತ್ರಕ್ಕೆ ನ್ಯಾಯ ಒದಗಿಸಿದ್ದರೂ ಇಬ್ಬರ ಜೋಡಿ ಅಷ್ಟೊಂದು ವರ್ಕೌಟ್ ಆಗಿಲ್ಲ.
ಅದರಲ್ಲೂ ನಿರ್ದೇಶಕರು ಇವರಿಬ್ಬರ ಕಾಂಬಿನೇಷನಲ್ಲಿ ಬಿಂಬಿಸಿರುವ ಹಾಡು ಬೇಕಿರಲಿಲ್ಲ ಎನ್ನುವುದು ಸತ್ಯ.
ಹಿರಿಯ ನಟ ಶಿವರಾಮ್ ರವರು ನಮ್ಮಿಂದ ಕಣ್ಮರೆಯಾಗಿದ್ದರೂ ಭೈರಾದೇವಿಯ ಮತ್ತೆ ಅವರನ್ನು ನೋಡುವ ಭಾಗ್ಯ ಪ್ರೇಕ್ಷಕರದ್ದು.

ಇನ್ನೂ ಅಘೋರಿಯ ಗುರುವಿನ ಪಾತ್ರದಲ್ಲಿ ನಟ ರವಿಶಂಕರ್ ಕಣ್ಣುಗಳಲ್ಲೇ ಭಯ ಹುಟ್ಟಿಸುತ್ತಾರೆ. ಮಂತ್ರ ತಂತ್ರಗಳಿಂದ ಬೀಜ ಮಂತ್ರಗಳನ್ನು ಪಟ ಪಟನೇ ಹಾಡಿ ಭೋರ್ಗರೆಯುವ ಮಳೆಯಂತೆ ಅಬ್ಬರಿಸಿ ತಮ್ಮ ಅಭಿನಯದ ಕೌಶಲ್ಯಕ್ಕೆ ಮತ್ತಷ್ಟು ಸಾಣೆ ಹಿಡಿದಿದ್ದಾರೆ.
ಇಲ್ಲಿ ಅಘೋರಿಗಳು ತಮ್ಮ ಅಘೋರ ಶಕ್ತಿಯಿಂದ, ಕಠಿಣ ಆಚಾರ ವಿಚಾರಗಳ ಮೂಲಕ
ಆತ್ಮ, ಪರಮಾತ್ಮಗಳನ್ನು ಸಂಪರ್ಕಿಸುವ ವಿದ್ಯೆ ತರ್ಕಬದ್ದವಾದದ್ದು.
ನಿರ್ದೇಶಕ ಶ್ರೀಜೈ ಅಘೋರಿಗಳ ಲೋಕದ ಒಂದಷ್ಟು ರಹಸ್ಯಗಳನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ.
ನಾಗಾ ಸಾಧುಗಳು ಮತ್ತು ಅಘೋರಿಗಳ ನಡುವಿನ ವ್ಯತ್ಯಾಸವನ್ನು ಪರಿಚಯಿಸಿದ್ದಾರೆ.
ಶವ ಭಕ್ಷಣೆ, ಭಂಗೀ ಸೇದುವ ಪರಿಯನ್ನು ಮೈ ಜುಮ್ಮೆನ್ನಿಸುವಂತೆ ಚಿತ್ರೀಕರಿಸಿದ್ದಾರೆ. ಅಘೋರಿಗಳ ಲೋಕದ ಪರಿಚಯವನ್ನು ಸಂಕ್ಷಿಪ್ತವಾಗಿ ತೆರೆದಿಟ್ಟಿದ್ದಾರೆ ಎನ್ನಬಹುದು.
ಕೆಕೆ ಸೆಂಥಿಲ್ ರವರ ಸಂಗೀತ, ಹಾಗೂ ಹಿನ್ನೆಲೆ ಸಂಗೀತ ಚಿತ್ರಕ್ಕೆ ಸುಂದರವಾದ ಫ್ರೇಮ್ ಆಗಿದೆ. ಹಾಗೆ ಈ ಚಿತ್ರಕ್ಕೆ ಬೆನ್ನೆಲುಬಾಗಿ ಜಿ.ಎಸ್. ವಾಲಿಯವರ ಕ್ಯಾಮೆರಾ ಕೈಚಳಕ ತುಂಬಾ ಚನ್ನಾಗಿ ಮೂಡಿ ಬಂದಿದೆ.

ಕಥಾ ಸಾರಂಶ
ಅರವಿಂದ್ ಒಬ್ಬ ಪೋಲೀಸ್ ಅಧಿಕಾರಿ ಆತನ ಹೆಂಡತಿಯ ಸಾವು ಮತ್ತು ಆತನ ಮನೆಯಲ್ಲಿ ಅತೃಪ್ತ ಆತ್ಮದ ಕಾಟ ನಿರಂತರ ಕಾಡುತ್ತದೆ. ದೆವ್ವದ ಕಾಟದ ವಿಮುಕ್ತಿಗೆ ಮೊರೆ ಹೋಗುವುದು ದೂರದ ವಾರಣಾಸಿಯ ಕಾಡಿನಲ್ಲಿರುವ ಅಘೋರಿಗಳ ಸಹಾಯಕ್ಕೆ. ಅಲ್ಲಿ ಇವರಿಗೆ ಸಿಗುವುದೇ ಭೈರಾದೇವಿ ಎಂಬ ಹೆಣ್ಣು ಅಘೋರಿ. ಆಕೆಯ ಸಹಾಯದಿಂದ ಆತ್ಮದ ಆವಾಹನೆ ಅಲ್ಲಿಂದ ಒಂದಷ್ಟು ಸತ್ಯಗಳು, ಕರಾಳ ಮುಖಗಳು ಬಿಚ್ಚಿಕೊಳ್ಳುತ್ತವೆ. ಅರವಿಂದನ ಮಗಳು, ಹೆಂಡತಿ, ನಾದಿನಿ, ಅರವಿಂದನ ಜೊತೆಗೆ ಆ ಅತೃಪ್ತ ಆತ್ಮದ ವಿಕೃತ ಸಂಭಂದದ ಪರಿಚಯ ಎಲ್ಲವೂ ಪ್ರೇಕ್ಷಕರಿಗೆ ಅಚ್ಚರಿಯಾಗುತ್ತಾ ಹೋಗುತ್ತದೆ.
ಈ ಆತ್ಮ ಯಾರದ್ದು, ಹೆಂಡತಿಯ ಸಾವು ಹೇಗಾಗುತ್ತದೆ, ಈ ಆತ್ಮಕ್ಕೂ ಇವರಿಗೂ ಏನು ಸಂಭಂದ, ಪಾಠ ಹೇಳಲು ಹೋಗುವ ಕಾಲೇಜಿನ ಟೀಚರ್ ಹಿಂದೆ ಪ್ರೀತಿಯ ಬಲೆ ಬೀಸುವ ಹುಡುಗರು, ರಸ್ತೆಯಲ್ಲೊಂದು ಅಪಘಾತ, ಮನೆಯಲ್ಲೊಂದು ಅವಗಡ, ಕುಡಿತದ ನಿಶೆ, ಹೆಣ್ಣಿನ ಮೇಕಿನ ಆಸೆ ಏನೆಲ್ಲಾ ಮಾಡಿಸುತ್ತದೆ. ಈ ಎಲ್ಲಾ ಗೊಂದಲಗಳಿಗೆ ಭೈರಾದೇವಿ ಹೇಗೆ ಅಂತ್ಯ ನೀಡುತ್ತಾಳ ಅಥವಾ ಕಣ್ಣಮುಂದೆ ನಡೆಯುವ ಕಾಮುಖರ ಅಟ್ಟಹಾಸವನ್ನು ಸಧೆ ಬಡೆಯುತ್ತಾಳಾ ಹೀಗೆ ಅಚ್ಚರಿ, ವಿಸ್ಮಯಗಳನ್ನು ಅನುಭವಿಸಲು ಪ್ರೇಕ್ಷಕರು ಸಿನಿಮಾ ನೋಡಲೇ ಬೇಕಾಗುತ್ತದೆ.

ಇಲ್ಲಿ ಪ್ರೀತಿ, ಪ್ರೇಮ, ಸೌಂದರ್ಯ, ಹಾಸ್ಯ, ಆಸೆ, ದ್ವೇಷ, ಕೊಲೆ, ಅಧಿಕಾರ ದುರ್ಬಳಕೆ, ವಿಕೃತ ಮನಸ್ಸಿನ ಕರಾಳತೆ, ದೆವ್ವ, ಧೈವ, ಘೋರ ಅಘೋರಗಳನ್ನು ಚಿತ್ರದಲ್ಲಿ ನೋಡಬಹುದು. ಇದೊಂದು ಕೌಟುಂಬಿಕ ಮನರಂಜನೆಯ ಚಿತ್ರ. ಪ್ರೇಕ್ಷಕನ ಹಣಕ್ಕೆ ಮೋಸವಾಗದ ಪಕ್ಕಾ ಪೈಸಾ ವಸೂಲ್ ಚಿತ್ರ ಭೈರಾದೇವಿಯ ಸೌಂದರ್ಯವನ್ನು ಕಣ್ತುಂಭಿಕೊಳ್ಳಬಹುದು.