“Bhagyaraja namma Mukhya mantri album song Released. “ಭಾಗ್ಯರಾಜ ನಮ್ಮ ಮುಖ್ಯಮಂತ್ರಿ”ವಿಡಿಯೋ ಸಾಂಗ್ ಬಿಡುಗಡೆ
“ಭಾಗ್ಯರಾಜ ನಮ್ಮ ಮುಖ್ಯಮಂತ್ರಿ”
ವಿಡಿಯೋ ಸಾಂಗ್ ಬಿಡುಗಡೆ
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕರೂ ಆದ ಎಸ್.ನಾರಾಯಣ್ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಹಾಗೂ ಸಾಧನೆಗಳ ಬಗ್ಗೆ ಅಲ್ಲದೆ ಅವರು ಅಧಿಕಾರ ವಹಿಸಿಕೊಂಡ ಮೇಲೆ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳ ಕುರಿತಂತೆ ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದು ಹಾಡುಗಳನ್ನು ಚಿತ್ರೀಕರಿಸಿದ್ದಾರೆ.
ಮುಖ್ಯಮಂತ್ರಿಗಳ ಆಪ್ತರೂ ಆದ ನಿರ್ಮಾಪಕ ಎಸ್.ಆರ್. ಸನತ್ ಕುಮಾರ್ ಅವರು ಈ ಆಲ್ಬಂಗೆ ಬಂಡವಾಳ ಹೂಡಿದ್ದಾರೆ.
ನಾಲ್ಕು ಹಾಡುಗಳನ್ನೊಳಗೊಂಡ ವೀಡಿಯೋ ಆಲ್ಬಂ “ಭಾಗ್ಯರಾಜ ನಮ್ಮ ಮುಖ್ಯಮಂತ್ರಿ” ಬಿಡುಗಡೆ ಕಾರ್ಯಕ್ರಮ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ವೀಡಿಯೋ ಸಾಂಗ್ ಗಳನ್ನು ಬಿಡುಗಡೆ ಮಾಡಿ ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ, ಒಳ್ಳೆದಾಗಲಿ ಎಂದು ನಿರ್ಮಾಪಕ ಸನತ್ ಕುಮಾರ್, ನಿರ್ದೇಶಕ ಎಸ್. ನಾರಾಯಣ್ ಅವರಿಗೆ ಶುಭ ಹಾರೈಸಿದರು.
ಭಾಗ್ಯರಾಜ ಹಾಡುಗಳ ಸಾಹಿತ್ಯ ಬರೆದು, ಸಂಗೀತದ ಜೊತೆಗೆ ನಿರ್ದೇಶನವನ್ನೂ ಮಾಡಿರುವ ಎಸ್.ನಾರಾಯಣ್ ಮಾತನಾಡಿ ಈವರೆಗೆ ನಾನು ಸಿನಿಮಾ ಹಾಡುಗಳನ್ನು ಮಾತ್ರ ಬರೆಯುತ್ತಿದ್ದೆ. ಮೊದಲಬಾರಿಗೆ ಒಬ್ಬ ಜನಪ್ರಿಯ ಸಿಎಂ ಮಾಡಿದ ಸಾಧನೆಗಳನ್ನು ಕಂಡು ಅವರ ಬಗ್ಗೆ ಬರೆಯಬೇಕು ಅನ್ನಿಸಿತು, ಇದು ಹೊಗಳಿಕೆಯಲ್ಲ, ನನಗನಿಸಿದ್ದನ್ನು ಬರೆದಿದ್ದೇನೆ ಎಂದು ಹೇಳಿದರು.