Avalu laila alla many majnu alla. ಅವಳು ಲೈಲಾ ಅಲ್ಲ, ನಾನು ಮಜ್ನು ಅಲ್ಲ ‘ನೀನು ಹೋಗೋ ದಾರೀಲಿ’ ಪ್ರೇಮಗೀತೆ ಬಿಡುಗಡೆ
ಅವಳು ಲೈಲಾ ಅಲ್ಲ, ನಾನು ಮಜ್ನು ಅಲ್ಲ
‘ನೀನು ಹೋಗೋ ದಾರೀಲಿ’ ಪ್ರೇಮಗೀತೆ ಬಿಡುಗಡೆ
ಯಲ್ಲು ಪುಣ್ಯಕೋಟಿ ಅವರ ನಿರ್ದೇಶನದ ಅವಳ್ ಲೈಲಾ ಅಲ್ಲ ನಾನ್ ಮಜ್ನು ಅಲ್ಲ ಚಿತ್ರದ ಡ್ಯುಯೆಟ್ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಫಿಲಂ ಚೇಂಬರ್ ಅಧ್ಯಕ್ಷ ಭಾ.ಮ. ಹರೀಶ್ ಸಾಂಗ್ ರಿಲೂಸ್ ಮಾಡಿ ಶುಭ ಹಾರೈಸಿದರು. ಅಜಯ್ ಈ ಚಿತ್ರದ ನಾಯಕನಾಗಿದ್ದು, ನಿಹಾರಿಕಾ, ಅಶ್ವಿನಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಡಿಂಗ್ರಿ ನರೇಶ್ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ.
ಮೊದಲಿಗೆ ಚಿತ್ರದ ನಾಯಕ ಹಾಗೂ ನಿರ್ಮಾಪಕರೂ ಆದ ಅಜಯ್ ಮಾತನಾಡಿ, ನನ್ನ ತಂದೆಯೂ ಒಬ್ಬ ರಂಗಭೂಮಿ ಕಲಾವಿದರು, ಅವರನ್ನು ನೋಡಿ ಬೆಳೆದ ನನಗೆ ನಟನೆ ಅಂದ್ರೆ ಮೊದಲಿಂದಲೂ ಬಹಳ ಇಷ್ಟ, ರಾಯಚೂರಿನಲ್ಲಿ ಕಾಲೇಜ್ ಮುಗಿಸಿ ಕೆಎಎಸ್ ತರಬೇತಿಗಾಗಿ ಬೆಂಗಳೂರಿಗೆ ಬಂದಿದ್ದೆ, ಆಗಲೇ ನೀನಾಸಂ ಆಫರ್ ಬಂತು. ನಂತರ ನೀನಾಸಂನಲ್ಲಿ ಆಕ್ಟಿಂಗ್ ತರಬೇತಿ ಪಡೆದು, ಸಾಕಷ್ಟು ಆಡಿಷನ್ ಗಳನ್ನು ಅಟೆಂಡ್ ಮಾಡಿದೆ, ನಂತರ ನಾವೇ ಬಂಡವಾಳ ಹೂಡಿ ಸಿನಿಮಾ ಆರಂಭಿಸಿದೆವು, ಚಿತ್ರವನ್ನು ಕೋವಿಡ್‌ಗೂ ಮುಂಚೆಯೇ ಶುರು ಮಾಡಿದ್ದೆವು. ೧೬ರಿಂದ ೨೪ ವರ್ಷದ ಹುಡುಗ, ಹುಡುಗಿಯರ ಕುರಿತಾದ ಚಿತ್ರ. ಯಲ್ಲು ಅವರು ಒಳ್ಳೇ ಕಥೆ ಮಾಡಿಕೊಂಡು, ನಿರ್ದೇಶನ ಮಾಡಿದ್ದಾರೆ, ಸಂತು ಎಂಬ ಸಾಫ್ಟ್ ಹಾಗೂ ರಫ್ ಕ್ಯಾರೆಕ್ಟರ್ ಹುಡುಗನಾಗಿ ಎರಡು ಶೇಡ್ ಇರುವ ಪಾತ್ರಗಳಲ್ಲಿ ನಾನು ಕಾಣಿಸಿಕೊಂಡಿದ್ದೇನೆ, ಆತ ಹೈಸ್ಕೂಲಿನಲ್ಲಿದ್ದಾಗ, ನಂತರ ಕಾಲೇಜಿಗೆ ಹೋದ ಮೇಲೆ, ಆತನ ಜೀವನದಲ್ಲಿ ಪ್ರೀತಿ ಪ್ರೇಮದ ವಿಷಯದಲ್ಲಿ ಏನೇನೆಲ್ಲ ಘಟನೆಗಳು ನಡೆದವು ಎನ್ನುವುದೇ ಚಿತ್ರದ ಕಥೆ, ಲವ್, ಸೆಂಟಿಮೆಂಟ್ ಜೊತೆಗೆ ಒಂದಷ್ಟು ಸಸ್ಪೆನ್ಸ್ ಕೂಡ ಚಿತ್ರದಲ್ಲಿದೆ, ಜೊತೆಗೆ ೪ ಸುಂದರ ಹಾಡುಗಳಿದ್ದು, ಕೌಶಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ನಾವು ಆಕಸ್ಮಿಕವಾಗಿ ಏನಾದರೂ ಮಾತನ್ನು ಹೇಳಿದರೆ, ಅದು ಆತನ ಲೈಫ್‌ನಲ್ಲಿ ಹೇಗೆ ರಿಫ್ಲೆಕ್ಟ್ ಆಗುತ್ತದೆಂದು ನಮ್ಮ ಚಿತ್ರ ಹೇಳುತ್ತದೆ ಎಂದು ವಿವರಿಸಿದರು,
ನಂತರ ನಿರ್ದೇಶಕ ಯಲ್ಲು ಪುಣ್ಯಕೋಟಿ ಮಾತನಾಡಿ ನಾನೂ ಸಹ ಕೊಪ್ಪಳದವನು, ನನಗೆ ಕಥೆ ಬರೆಯೋ ಹವ್ಯಾಸ ಮೊದಲಿಂದಲೂ ಇತ್ತು. ನಿರ್ದೇಶನದ ಬಗ್ಗೆ ಹೈದರಾಬಾದ್ ಕಡೆ ಹೋಗಿ ಒಂದಷ್ಟು ಕಲಿತೆ, ನಂತರ ಟಿವಿಯಲ್ಲಿ ವರ್ಕ್ ಮಾಡುವಾಗ ಅಜಯ್ ಸಿಕ್ಕರು, ನಾನು ಮಾಡಿಕೊಂಡಿದ್ದ ಕಥೆಯನ್ನು ಹೇಳಿದಾಗ ಅವರೂ ಒಪ್ಪಿದರು. ಹಳ್ಳಿ ಮತ್ತು ನಗರದಲ್ಲಿ ನಡೆಯುವ ಕಥೆ, ಚಿತ್ರದುರ್ಗ, ಹೊಸಪೇಟೆ, ಬೆಂಗಳುರು, ಹಿರಿಯೂರು, ಬಳ್ಳಾರಿ, ರಾಯಚೂರು ಕೊಪ್ಪಳ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ, ಹೈಸ್ಕೂಲ್ ಎಪಿಸೋಡನ್ನು ಚಿಕ್ಕಮಗಳೂರಲ್ಲಿ ಶೂಟ್ ಮಾಡಿದ್ದೇವೆ, ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದ್ದು ಸೆ.೮ಕ್ಕ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.