Aryan movie released on September 12th with Association Hombale films. ಮಲಯಾಳಂನ “ಎಆರ್‌ಎಂ” ಚಿತ್ರ ಹೊಂಬಾಳೆ ಸಹಯೋಗ ದೊಂದಿಗೆ ಸೆಪ್ಟೆಂಬರ್ 12ರಂದು ಬಿಡುಗಡೆ.
ಮಲಯಾಳಂನ “ಎಆರ್‌ಎಂ” ಸಿನಿಮಾದ ವಿತರಣೆ ಹಕ್ಕು ಪಡೆದ ಹೊಂಬಾಳೆ; ಸೆಪ್ಟೆಂಬರ್ 12ರಂದು ಪ್ಯಾನ್ ಇಂಡಿಯಾ ಚಿತ್ರ ಬಿಡುಗಡೆ
ಮಲಯಾಳಂನ ಖ್ಯಾತ ನಟ ಟೊವಿನೋ ಥಾಮಸ್ ನಾಯಕನಾಗಿ ನಟಿಸಿರುವ “ಎಆರ್‌ಎಂ” ಸಿನಿಮಾ ಇದೀಗ ಬಿಡುಗಡೆಯ ಸನಿಹ ಬಂದಿದೆ. ಇದೇ ಸೆಪ್ಟೆಂಬರ್ 12ರಂದು ಈ ಸಿನಿಮಾ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಶೆರಟನ್ ಹೊಟೇಲ್‌ನಲ್ಲಿ 3D ಫ್ಯಾಂಟಸಿ ಶೈಲಿಯ ARM ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಇನ್ನೇನು ಶೀಘ್ರದಲ್ಲಿಯೇ ತೆರೆ ಮೇಲೆ ಈ ಸಿನಿಮಾ ರಿಲೀಸ್ ಆಗಲಿದೆ. ವಿಶೇಷ ಏನೆಂದರೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಈ ಸಿನಿಮಾವನ್ನು ಕನ್ನಡದಲ್ಲಿ ಹೊಂಬಾಳೆ ಫಿಲಂಸ್ ಬಿಡುಗಡೆ ಮಾಡಲಿದೆ.

ಮ್ಯಾಜಿಕ್ ಫ್ರೇಮ್ಸ್ ಬ್ಯಾನರ್ ಅಡಿಯಲ್ಲಿ ಲಿಸ್ಟಿನ್ ಸ್ಟೀಫನ್ ಮತ್ತು UGM ಮೂವೀಸ್ ಅಡಿಯಲ್ಲಿ ಡಾ. ಜಕರಿಯಾ ಥಾಮಸ್ “ಎಆರ್‌ಎಂ” ಸಿನಿಮಾವನ್ನು ನಿರ್ಮಿಸಿದ್ದಾರೆ. “ಎಆರ್‌ಎಂ” ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಪ್ಯಾನ್ ಇಂಡಿಯನ್ ಸಿನಿಮಾ. ಮಲಯಾಳಂ ಚಿತ್ರರಂಗದಿಂದ ಬಾಲಿವುಡ್‌ನಲ್ಲೂ ಛಾಪು ಮೂಡಿಸಿರುವ ಜೋಮನ್ ಟಿ. ಜಾನ್ ಅವರ ಛಾಯಾಗ್ರಹಣ ಮತ್ತು ಶಮೀರ್ ಮುಹಮ್ಮದ್ ಅವರ ಸಂಕಲನ “ಎಆರ್‌ಎಂ” ಚಿತ್ರಕ್ಕಿದೆ.

ದಿಬು ನೈನನ್ ಥಾಮಸ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಹಿಂದೆ ಕನಾ ಮತ್ತು ನಟ ಸಿದ್ಧಾರ್ಥ್ ಅವರ ಚಿತ್ತಾ ಸಿನಿಮಾಗಳಿಗೂ ಸಂಗೀತ ನೀಡಿದ್ದರು. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ನಟಿಯರಾದ ಕೃತಿ ಶೆಟ್ಟಿ, ಐಶ್ವರ್ಯ ರಾಜೇಶ್ ಮತ್ತು ಸುರಭಿ ಲಕ್ಷ್ಮಿ “ಎಆರ್‌ಎಂ” ಸಿನಿಮಾದಲ್ಲಿದ್ದಾರೆ. ಇನ್ನುಳಿದಂತೆ ಬೇಸಿಲ್ ಜೋಸೆಫ್, ಜಗದೀಶ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಕಬೀರ್ ಸಿಂಗ್, ಪ್ರಮೋದ್ ಶೆಟ್ಟಿ ಮತ್ತು ರೋಹಿಣಿ ಚಿತ್ರದಲ್ಲಿದ್ದಾರೆ.

ಸುಜಿತ್ ನಂಬಿಯಾರ್ ಎಆರ್‌ಎಂ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಅವರ ಜತೆಗೆ ದೀಪು ಪ್ರದೀಪ್ ಸಾಥ್ ನೀಡಿದ್ದಾರೆ. ವಿಕ್ರಮ್ ಮೂರ್, ಫೀನಿಕ್ಸ್ ಪ್ರಭು ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಅಂದಹಾಗೆ ಈ ಚಿತ್ರವೂ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಕನ್ನಡದಲ್ಲಿ ಹೊಂಬಾಳೆ ಫಿಲಂಸ್, ತೆಲುಗಿನಲ್ಲಿ ಮೈತ್ರಿ ಮೂವಿ ಮೇಕರ್ಸ್ ಮತ್ತು ಹಿಂದಿಯಲ್ಲಿ ಅನಿಲ್ ಥಡಾನಿ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.