Apple Cut Movie Review. ಆಪಲ್ ಕಟ್ ಚಿತ್ರ ವಿಮರ್ಶೆ ಸರಣಿ ಕೊಲೆಗಳ ಸುತ್ತಾ, ಅಮ್ಮಾ ಐ ಲವ್ ಯೂ… Rating – 3/5.
ಚಿತ್ರ ವಿಮರ್ಶೆ – ಆಪಲ್ ಕಟ್
Rating – 3/5.
ಚಿತ್ರ: ಆಪಲ್ ಕಟ್
ನಿರ್ಮಾಣ: ಶಿಲ್ಪ ಪ್ರಸನ್ನ
ನಿರ್ದೇಶನ: ಸಿಂಧೂಗೌಡ
ಸಂಗೀತ : ವೀರ್ ಸಮರ್ಥ್
ಛಾಯಾಗ್ರಹಣ : ರಾಜೇಶ್ ಗೌಡ
ಸಂಕಲನ : ಸುಜೀಂದ್ರ N.ಮೂರ್ತಿ
ತಾರಾಗಣ : ಸೂರ್ಯ, ಅಶ್ವಿನಿ ಪೋಲೆಪಲ್ಲಿ, ಮೀನಾಕ್ಷಿ, ಅಪ್ಪಣ್ಣ ರಾಮದುರ್ಗ, ಅಮೃತ ಪವಾರ್, ಶಿಲ್ಪ, ಮುಂತಾದವರು.

ತೀಟೆ ತೆವಲಿಗೆ ಸಿಕ್ಕ ಸಿಕ್ಕವರ ಜೊತೆ ಮಲಗಿ ಸುಖ ಪಡುವವರಿಗೆ, ಸದ್ದಿಲ್ಲದೇ ಸುಖವಾಗಿ ಸಾಯಿಸುವ ವಿಕೃತ ಮನಸ್ಸಿನ ಕೊಲೆಗಾರನ ಕಥೆಯೇ “ಆಪಲ್ ಕಟ್”
ಆಪಲ್ ಕಟ್ ಮಾಡುವಷ್ಟು ಸಲೀಸಾಗಿ ಸಾಲು ಸಾಲು ಹೆಣಗಳು ಉರುಳುತ್ತಿರುತ್ತದೆ, ಅದು ಹೇಗೆ ಕೊಲೆಯಾಗುತ್ತಿದೆ, ಯಾವುದರಿಂದ ಕೊಲೆಯಾಗುತ್ತಿದೆ, ಆ ಕೊಲೆಯಾದ ಶವಗಳ ಅಸ್ಥಿ ಪಂಜರಗಳಿಂದ ಇದು ಗಂಡಿನದ್ದಾ ಅಥವಾ ಹೆಣ್ಣಿನ ದೇಹನಾ ಎಂದು ಕಂಡು ಹಿಡಿಯುವುದೇ ಆನ್ತ್ರೋಪಾಲಜಿ ಎಂಬ ವೈಧ್ಯಕೀಯ ಟೀಂ ನಿಂದ.

ಆ ಟೀಮ್ ನಾಯಕ ಮತ್ತು ಆನ್ತ್ರೋಪಾಲಜಿ ಪ್ರೊಫೆಸರ್ ಆಗಿ ಮೊದಲ ಬಾರಿಗೆ ಪರಿಪೂರ್ಣ ನಾಯಕನಾಗಿ ಬಣ್ಣ ಹಚ್ಚಿ ಬೆಳ್ಳಿತೆರೆಯ ಮೇಲೆ ಅಭಿನಯಿಸಿರುವ ನಟ ಸೂರ್ಯ.
ಸೂರ್ಯ ಈಗಾಗಲೇ ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣುಸಿಕೊಂಡಿದ್ದರೂ ಈ ಚಿತ್ರದ ಮೂಲಕ ಒಬ್ಬ ಕಥಾನಾಯಕನಾಗಿ ಎರಡು ಶೇಡ್ ಗಳಲ್ಲಿ ಪಾತ್ರವನ್ನು ನಿಭಾಯಿಸಿದ್ದಾರೆ.
ಆನ್ತ್ರೋಪಾಲಜಿ ಪ್ರೊಫೆಸರ್ ಆಗಿ ಹೆಣಗಳನ್ನು ಕುಯ್ಯುತ್ತಾ, ತನ್ನ ತಾಯಿಯ ಮಮತೆಗಾಗಿ ಹಂಬಲಿಸುವ ಹಾಗೂ ಅವಳನ್ನು ಹುಡುಕುವ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಚಿತ್ರದ ಕೊನೆಯ ಕ್ಲೈಮ್ಯಾಕ್ಸ್ ನಲ್ಲಿ ಸೂರ್ಯ ತನ್ನೆಲ್ಲಾ ಪ್ರತಿಭೆಯನ್ನು ಪ್ರೇಕ್ಷಕರ ಮುಂದಿಟ್ಟಿದ್ದಾನೆ. ಇನ್ನು ಪ್ರೇಕ್ಷಕರು ಈತನ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಡಬೇಕು, ಕೊಡುತ್ತಾರೆ ಕೂಡ.

ಇನ್ನು ಈ ಚಿತ್ರದಲ್ಲಿನ ಕೊಲೆಗಳನ್ನು ಬಹಳ ವಿಚಿತ್ರವಾಗಿ, ವಿಭಿನ್ನವಾಗಿ ಮಾಡುವ ಹಾಗೂ ಅದನ್ನು ಕಂಡುಹಿಡಿಯುವ ವಿಧಾನವನ್ನು, ಕೊಲೆ ಮಾಡುವ ಸಾಧನವನ್ನು ಬೇರೆಯದೇ ರೀತಿಯ ಹೊಸತನದ ಕಥೆಯನ್ನು ಹೆಣೆಯುವ ಮೂಲಕ ದೊಡ್ಡ ಪರದೆಯ ಮೇಲೆ ಮೊದಲ ಬಾರಿಗೆ ನಿರ್ದೇಶಕಿಯಾಗಿ ಜವಾಬ್ಧಾರಿಯನ್ನು ಹೊತ್ತಿರುವುದು ನಿರ್ದೇಶಕಿ ಸಿಂಧೂ ಗೌಡ.
ಈಕೆಗೆ ಹುಟ್ಟಿನಿಂದ ಸಿನಿಮಾ ನಂಟಿದೆ ಎಂದೇ ಹೇಳಬಹುದು. ಹೌದು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಿರುವ ಹಿರಿಯ ನಿರ್ದೇಶಕ ರಾಜ್ ಕಿಶೋರ್ ರವರ ಎರಡನೇ ಮಗಳಾದ ಸಿಂಧೂ ಈಗಾಗಲೇ ಕಿರುತೆರೆಯಲ್ಲಿ ಬಹಳಷ್ಟು ಧಾರವಾಹಿಗಳಲ್ಲಿ ಅಭಿನಯಿಸಿ ಬಣ್ಣದ ರುಚಿ ನೋಡಿದ್ದಾರೆ.

ಆದರೆ ಇದೇ ಮೊದಲ ಬಾರಿಗೆ ಈ ರೀತಿಯ ಮರ್ಡರ್ ಮಿಷ್ಟ್ರಿ ಕ್ರೈಂ, ಸಸ್ಪೆನ್ಸ್ ಜಾನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದು ಅಷ್ಟು ಸುಲಭದ ಮಾತಲ್ಲ. ಒಬ್ಬ ಹೆಣ್ಣು ಮಗಳಾಗಿ ಈ ರೀತಿಯ ಕಥೆಯನ್ನು ಹೆಣೆದು ಪ್ರೇಕ್ಷಕರ ಮುಂದೆ ಇಟ್ಟಿರುವುದು ನಿಜಕ್ಕೂ ಮೆಚ್ಚಬೇಕಾದ ವಿಷಯ.
ಪೋಲಿಸ್ ಅಧಿಕಾರಿಯಾಗಿ ಬಲ ರಾಜವಾಡಿ ಈ ಕೊಲೆಗಳ ಹಿಂದಿನ ತನಿಖೆಯನ್ನು ಕಾಮಿಡಿ ಮತ್ತು ಸೀರಿಯಸ್ ಆಗಿ ನಿಭಾಯಿಸಿದ್ದಾರೆ.
ನಟ ಅಪ್ಪಣ್ಣ ರಾಮದುರ್ಗ (ರಾಹುಲ್) ಇಲ್ಲಿ ನಾಯಕನ ಗೆಳೆಯನಾಗಿ ಕೊಲೆಯ ಜಾಡಿಗೆ ಸಿಲುಕಿ ನಲುಗುವ ಪಾತ್ರದಲ್ಲಿ ಕಾಣಿಸಿಕೊಂಡರೆ, ನಟಿ ಅಶ್ವಿನಿ ಪೋಲೆಪಲ್ಲಿ( ಆರಾಧ್ಯ) ಸೂರ್ಯ (ಸತ್ಯ)ನ ಪ್ರೇಯಸಿಯಾಗಿ ಹಾಗೂ ಆನ್ತ್ರೋಪಾಲಜಿಷ್ಟ್ ಆಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಜೊತೆಗೆ ಅಮೃತ ಎಂಬ ಮತ್ತೊಬ್ಬ ನಟಿ ಅಪ್ಪಣ್ಣನ ಜೋಡಿಯಾಗಿ ತೆರೆ ಹಂಚಿಕೊಂಡಿದ್ದಾರೆ.

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಿಯಾಗಿ ಹಲವಾರು ಪಾತ್ರಗಳನ್ನೂ ನಿಭಾಯಿಸಿರುವ ನಟಿ ಶಿಲ್ಪ ಈ ಚಿತ್ರದಲ್ಲಿ ಅಮೃತ ತಾಯಿಯಾಗಿ ನೈಜವಾಗಿ ಅಭಿನಯಿಸಿದ್ದಾರೆ.
ಶಿಲ್ಪಾ ಪ್ರಸನ್ನ ಒಬ್ಬ ಮಹಿಳಾ ನಿರ್ಮಾಪಕಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ಒಬ್ಬ ಮಹಿಳೆಯಾಗಿ ಸಿನಿಮಾ ನಿರ್ಮಿಸಿ ಒಬ್ಬ ಹೊಸ ನಿರ್ದೇಶಕಿ ಹಾಗೂ ನಾಯಕ ನಟನನ್ನು ಬೆಳ್ಳಿತೆರೆಗೆ ತಂದಿದ್ದಾರೆ.
ನಾಯಕನ ಕಳೆದು ಹೋಗಿದ್ದ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಮೀನಾಕ್ಷಿ ಅಭಿನಯಿಸಿದ್ದಾರೆ. ಅವರು ಈಗಾಗಲೇ ಕಿರುತೆರೆ ಸಿನಿಮಾಗಳಲ್ಲಿ ತಾಯಿಪಾತ್ರದಲ್ಕಿ ಕಾಣಿಸಿ ಕೊಂಡಿದ್ದಾರೆ. ಆದರೆ ಈ ರೀತಿಯ ತಾಯಿ ಪಾತ್ರವನ್ನು ಈವರೆಗೂ ಮಾಡಿಲ್ಲ ಎನ್ನಬಹುದು.

ಚಿತ್ರದಲ್ಲಿ ಹಿನ್ನೆಲೆ ಸಂಗೀತದ ಜವಾಬ್ಧಾರಿಯನ್ನು ವೀರ್ ಸಮರ್ಥ್ ನಿಭಾಯಿಸಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾ ಆದ್ದರಿಂದ ಹಿನ್ನೆಲೆ ಸಂಗೀತ ವಿಶೇಷವಾಗಿದೆ.
ರಾಜೇಶ್ ಗೌಡ ತಮ್ಮ ಛಾಯಾಗ್ರಹಣದಿಂದ ನಿರ್ದೇಶಕರ ಕಲ್ಪನೆಗೆ ಜೀವ ತುಂಬಿದ್ದಾರೆ.
ನಾಯಕ ನಟ ಸೂರ್ಯನಿಗೆ ತಾಯಿಯ ಪ್ರೀತಿ ಸುಗುತ್ತಾ..?, ಸರಣಿ ಕೊಲೆಗಾರ ಸಿಗುತ್ತಾನಾ..? ಸೂರ್ಯ ತನ್ನ ಗೆಳೆಯನನ್ನು ಕೊಲೆಯ ಸುಳಿಯಿಂದ ಕಾಪಾಡುತ್ತಾನಾ..?, ಈ ಆಪಲ್ ಕಟ್ ಗೂ ಕೊಲೆ ಗಳಿಗೂ ಏನು ಸಂಭಂದ..? ಆನ್ತ್ರೋಪಾಲಜಿಗೂ, ಈ ಸಿನಿಮಾ ಕಥೆಗೂ ಏನು ಸಂಬಂದ ಈ ಎಲ್ಲಾ ಕೌತಕ ಪ್ರೆಶ್ನೆಗಳಿಗೆ ಪ್ರೇಕ್ಷಕರು ಚಿತ್ರ ನೋಡಬೇಕಾಗುತ್ತದೆ.
ಈ ವರೆಗೂ ಈ ತರದ ತಾಯಿ ಮಗನ ಬಾಂಧವ್ಯವನ್ನು ಕುರಿತು ಯಾರು ತೋರಿಸಿರದ ಚಿತ್ರ ಆಪಲ್ ಕಟ್ ಎನ್ನಬಹುದು.