Apaayavide Yccharike Movie Review: ದಾರಿ ತಪ್ಪಿದ ಮಕ್ಕಳ ಕಳ್ಳಾಟ , ಸ್ಯಾಂಡಲ್ ವುಡ್ ನಲ್ಲಿ ಸ್ಯಾಂಡಲ್ ವುಡ್ ಕಳ್ಳರು.
ಚಿತ್ರ ವಿಮರ್ಶೆ – ಅಪಾಯವಿದೆ ಎಚ್ಚರಿಕೆ
Rating – 3/5.
ಚಿತ್ರ: ಅಪಾಯವಿದೆ ಎಚ್ಚರಿಕೆ
ನಿರ್ಮಾಣ: V.G. ಮಂಜುನಾಥ್, ಪೂರ್ಣಿಮ N.ಗೌಡ
ನಿರ್ದೇಶನ: ಅಭಿಜಿತ್ ತೀರ್ಥಹಳ್ಳಿ
ಸಂಗೀತ : ಸುನಂದ ಗೌತಮ್
ಛಾಯಾಗ್ರಹಣ : ಸುನಂದ ಗೌತಮ್
ಸಂಕಲನ : ಹರ್ಷಿತಪ್ರಭು
ಇದೊಂದು ಹಾರರ್ ಕಾಮಿಡಿ, ಸಸ್ಪೆನ್ಸ್ ಚಿತ್ರ.
ಅಪಾಯವಿದೆ ಅಂತ ಗೊತ್ತಿದ್ದರೂ ಕಳ್ಳದಾರಿ ತುಳಿಯುವ, ಅಡ್ಡದಾರಿಯಲ್ಲಿ ಹಣ ಮಾಡಬೇಕೆನ್ನುವ ಹುನ್ನಾರಕ್ಕೆ ಕೈ ಜೋಡಿಸುವ ಮೂವರು ಯುವಕರ ಕಥೆಯೇ ಅಪಾಯವಿದೆ ಎಚ್ಚರಿಕೆ ಚಿತ್ರದ ಮೂಲ ಕಥೆ.

“ಅಪಾಯವಿದೆ ಎಚ್ಚರಿಕೆ”. ದುಡ್ಡು ಸಂಪಾದನೆಗಾಗಿ ಅಡ್ಡದಾರಿ ಹಿಡಿಯುವ,
ಡಿಗ್ರಿ ಪಾಸು ಮಾಡದೇ ಊರಿನ ಬೀದಿಗಳಲ್ಲಿ ದಂಡಪಿಂಡಗಳ ರೀತಿ ಅಲೆದಾಡಿಕೊಂಡಿರುವ ಮೂವರು
ಯುವಕರು ಕಾಡಿನ ಸಂಪತ್ತನ್ನು ನಾಶ ಮಾಡುವ ಯತ್ನದಲ್ಲಿ ಎದುರಾಗುವ ಅಪಾಯಗಳ ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ.
ನಿರ್ದೇಶಕ ಅಜಿತ್ ತೀರ್ಥಹಳ್ಳಿ
ಕಥೆಯನ್ನು ಸಾಮಾಜಿಕ ಕಳಕಳಿಯಿಂದ, ಅಡ್ಡದಾರಿ ಹಿಡಿದವರ ಬದುಕು ಏನಾಗುತ್ತದೆ ಎಂಬುದನ್ನು ತೋರಿಸಿದ್ದಾರೆ.
ಪೆಟ್ಗೆ (ರಾಘವ್), ಗಾಬ್ರಿಗೆ (ಮಿಥುನ್), ಸೂರಿ (ವಿಕಾಸ್) ಈ ಮೂವರು ಯುವಕರು ಕೆಲಸವಿಲ್ಲದೆ ಅಲೆಯುತ್ತಿರುತ್ತಾರೆ. ದಿನ ಬೆಳಗಾದರೆ ಸಾಲಗಾರರ ಕಾಟ, ನಿರುದ್ಯೋಗದಿಂದ ಬೇಸತ್ತ ಇವರು, ದುಡ್ಡು ಮಾಡಲು ಕೋಟೆ ಕಾಡಿನ ಅಡ್ಡದಾರಿ ಹಿಡಿಯುತ್ತಾರೆ.
ನಂತರ ಏನೆಲ್ಲಾ ಅನುಭವಿಸುತ್ತಾರೆ ಎಂಬುದನ್ನು ಹಾಸ್ಯ, ಹಾರರ್ ಮಿಶ್ರಿತದ ಮೂಲಕ ನಿರ್ದೇಶಕರು ತಿಳಿಸಿದ್ದಾರೆ.

ಚಿತ್ರ ಮೊದಲರ್ಧ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದರು ದ್ವಿತೀಯಾರ್ಧದಲ್ಲಿ ಪಿಕಪ್ ಆಗುತ್ತದೆ. ಮೊದಲು ಹಾಸ್ಯ, ತರಲೆ ಸನ್ನಿವೇಶಗಳು ಚಿತ್ರಕ್ಕೆ ಪೂರಕವಲ್ಲದಿದ್ದರೂ ಇಂಟರ್ ವೆಲ್ ನಂತರ ಸಿನಿಮಾ ಹಲವಾರು ಟ್ವಿಷ್ಟ್ ಗಳೊಂದಿಗೆ ಇಷ್ಟವಾಗುತ್ತದೆ.
ಹಣದ ದುರಾಸೆಗೆ ಕಾಡನ್ನು ಹಾಳು ಮಾಡ ಹೊರಟವರಿಗೆ ಏನೆಲ್ಲಾ ಗಂಡಾಂತರಗಳು ಆವರಿಸುತ್ತದೆ ಎನ್ನುವುದನ್ನು ದೆವ್ವಗಳ ಮೂಲಕ ಪಾಠ ಹೇಳಿದ್ದಾರೆ. ನಿರ್ದೇಶಕ ಅಜಿತ್ ತೀರ್ಥಹಳ್ಳಿ.
ನಿರ್ದೇಶಕರ ಊರಾದ ತೀರ್ಥಹಳ್ಳಿ ಸುತ್ತಮುತ್ತ ಮಲೆನಾಡಿನ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ.
ಸೂರಿ ಪಾತ್ರದಲ್ಲಿ ಅಣ್ಣಯ್ಯ ಧಾರವಾಹಿ ಖ್ಯಾತಿಯ ನಟ ವಿಕಾಶ್ ಉತ್ತಯ್ಯ ಅಭಿನಯ ಚೆನ್ನಾಗಿ ನಿಭಾಯಿಸಿದ್ದಾರೆ. ಒಬ್ಬ ಒಳ್ಳೆಯ ನಟನಾಗುವ ಎಲ್ಲಾ ಲಕ್ಷಣಗಳು
ಕಾಣಿಸುತ್ತದೆ. ಜೊತೆಗೆ ಸ್ನೇಹಿತರ ಪಾತ್ರ ಮಾಡಿರುವ ಮಿಥುನ್ ಮತ್ತು ರಾಘವ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ..

ಕಥೆಯಲ್ಲಿ ದೇವಿಕಾ ತಮ್ಮ ಪಾತ್ರದ ಮೂಲಕ ಟ್ವಿಸ್ಟ್ ನೀಡಿದ್ದಾರೆ, ನಟಿ ಹರಿಣಿ ಶ್ರೀಕಾಂತ್, ನಾಯಕಿ ರಾಧಾ ಭಗವತಿ, ರುದ್ರನಾಗಿ ದೇವ್, ಕಲಾವತಿಯಾಗಿ , ನಟ ಅಶ್ವಿನ್ ಹಾಸನ್ ಎಲ್ಲರೂ ತಮಗೆ ಸಿಕ್ಕ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಹಾಡುಗಳಿಗಿಂತ ಸುನಂದಾ ಗೌತಮ್ ಹಿನ್ನೆಲೆ ಸಂಗೀತ ಚೆನ್ನಾಗಿ ಮೂಡಿಬಂದಿದೆ, ಸುನಂದಾ ಗೌತಮ್ ಸಂಗೀತದ ಜೊತೆಗೆ ಛಾಯಾಗ್ರಾಹಕನಾಗಿ ಮಲೆನಾಡಿನ ಕಾಡಿನ ಸೌಂದರ್ಯವನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ.
ಒಟ್ಟಿನಲ್ಲಿ ಸಸ್ಪೆನ್ಸ್ , ಹಾರರ್, ಕಾಮಿಡಿಯ ಜೊತೆಗೆ ಸುಂದರ ಪರಿಸರವನ್ನು ಇಷ್ಟ ಪಡುವವರಿಗೆ ಅಪಾಯವಿದೆ ಎಚ್ಚರಿಕೆ ಇಷ್ಟವಾಗುತ್ತದೆ.