Actress Madhubala acting in Kannappa movie first look released. ಬೇಡ ಕುಲ ರಕ್ಷಣೆಗಿಳಿದ ಪನ್ನಗಾ; ವಿಷ್ಣು ಮಂಚು “ಕಣ್ಣಪ್ಪ” ಚಿತ್ರದಲ್ಲಿ ಮಧುಬಾಲ ಫಸ್ಟ್‌ ಲುಕ್‌ ಬಿಡುಗಡೆ

ಬೇಡ ಕುಲ ರಕ್ಷಣೆಗಿಳಿದ ಪನ್ನಗಾ; ವಿಷ್ಣು ಮಂಚು “ಕಣ್ಣಪ್ಪ” ಚಿತ್ರದಲ್ಲಿ ಮಧುಬಾಲ ಫಸ್ಟ್‌ ಲುಕ್‌ ಬಿಡುಗಡೆ

ಪಾತ್ರವರ್ಗದ ವಿಚಾರವಾಗಿಯೇ ಸಾಕಷ್ಟು ಸದ್ದು ಮಾಡುತ್ತಿದೆ ಟಾಲಿವುಡ್‌ನ ಕಣ್ಣಪ್ಪ ಸಿನಿಮಾ. ಈಗಾಗಲೇ ಸರಣಿ ಸ್ಟಾರ್‌ ಕಲಾವಿದರನ್ನೇ ಒಳಗೊಂಡಿರುವ ಕಣ್ಣಪ್ಪ ಸಿನಿಮಾ ಸದ್ಯ ಶೂಟಿಂಗ್‌ ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನೂ ಮುಂದುವರಿಸಿದೆ. ಜತೆಗೆ ಈಗಾಗಲೇ ಬಿಡುಗಡೆ ಆಗಿರುವ ಟೀಸರ್‌ ಸಹ ನೋಡುಗರ ಹುಬ್ಬೇರಿಸಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ವಿಷ್ಣು ಮಂಚು ಕಣ್ಣಪ್ಪನಾಗಿ ತಮ್ಮ ಖದರ್‌ ತೋರಿಸಲಿದ್ದಾರೆ. ಇದೀಗ ಇದೇ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಮಧುಬಾಲ ಅವರ ಲುಕ್‌ ಅನಾವರಣ ಮಾಡಲಾಗಿದೆ.

ನಟಿ ಮಧುಬಾಲಾ ಕಣ್ಣಪ್ಪ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದು ಈ ಹಿಂದೆಯೇ ಗೊತ್ತಿದ್ದ ವಿಚಾರ. ಆದರೆ, ಅವರ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಈ ವರೆಗೂ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಮಧುಬಾಲ ಅವರ ಪಾತ್ರ ಪರಿಚಯದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ಕಣ್ಣಪ್ಪ ಚಿತ್ರದಲ್ಲಿ ಪನ್ನಗ ಹೆಸರಿನ ಖಡಕ್‌ ಪಾತ್ರದಲ್ಲಿ ಮಧುಬಾಲ ಮಿಂಚು ಹರಿಸಲಿದ್ದಾರೆ. ಕೈಯಲ್ಲಿ ಕತ್ತಿಹಿಡಿದು ಶತ್ರುಗಳ ಸಂಹಾರಕ್ಕೆ ನಿಂತಂತಿದೆ ಮಧು ಅವರ ಫಸ್ಟ್‌ ಲುಕ್‌.

ಬೇಡ ಕುಲದ ನಾಯಕಿಯಾಗಿ ಮಧು ಅವರ ಪಾತ್ರ ಕಣ್ಣಪ್ಪ ಚಿತ್ರದಲ್ಲಿ ಸಾಗಲಿದೆ. ತಮ್ಮ ಸಮುದಾಯದ ನಾಯಕಿ ಮಾತ್ರವಲ್ಲ, ಹೋರಾಟದಲ್ಲಿಯೂ ದಿಟ್ಟೆ, ಧೀರೆ. ಅಂದುಕೊಂಡಂತೆ ಮಧುಬಾಲ ಅವರ ಪಾತ್ರ ಮೂಡಿಬಂದಿದ್ದು, ನೋಡುಗರಿಗೆ ಇಷ್ಟವಾಗಲಿದೆ ಎಂಬುದು ಚಿತ್ರತಂಡ ಭರವಸೆಯ ಮಾತುಗಳು. ಇನ್ನು ಈಗಾಗಲೇ ಕಣ್ಣಪ್ಪ ಚಿತ್ರದ ಟೀಸರ್‌ ಜಾಗತಿಕ ಮಟ್ಟದಲ್ಲಿಯೂ ಕ್ರೇಜ್‌ ಸೃಷ್ಟಿಸಿದೆ. ಇತ್ತೀಚಿನ ಕಾನ್‌ ಸಿನಿಮೋತ್ಸವದಲ್ಲಿ ಈ ಚಿತ್ರದ ಟೀಸರ್‌ ಬಿಡುಗಡೆಯಾಗಿ, ಜಾಗತಿಕ ಪ್ರೇಕ್ಷಕರ ಗಮನ ಸೆಳೆದಿತ್ತು.

ಕಣ್ಣಪ್ಪ ಸಿನಿಮಾ ಬರೀ ಇತಿಹಾಸವಲ್ಲ, ಇದು ಎರಡನೇ ಶತಮಾನದ ಚೋಳರ ಕಾಲದ ಕಥೆ ಎಂದು ಶಂಕರಾಚಾರ್ಯರು ಹೇಳಿದ್ದರು. 14 ನೇ ಶತಮಾನದಲ್ಲಿ ಕವಿ ಧೂರ್ಜಟಿ ಈ ಬಗ್ಗೆ ಬರೆದಿದ್ದಾರೆ. 18ನೇ ಶತಮಾನದಲ್ಲಿ ಬ್ರಿಟಿಷರೂ ಇಂಗ್ಲಿಷ್‌ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಇದೆಲ್ಲವನ್ನು ಅಧ್ಯಯನ ನಡೆಸಿ ಈ ಸಿನಿಮಾ ಮಾಡಲಾಗಿದೆ ಎಂದು ಟೀಸರ್‌ ಬಿಡುಗಡೆ ಸಂದರ್ಭದಲ್ಲಿ ವಿಷ್ಣು ಮಂಚು ಹೇಳಿಕೊಂಡಿದ್ದರು. ಹಾಗಾಗಿಯೇ ಕುತೂಹಲ ದುಪ್ಪಟ್ಟಾಗಿದೆ.

ಚಿತ್ರದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಶರತ್‌ಕುಮಾರ್, ಮಧುಬಾಲ, ಕಾಜಲ್‌ ಅಗರ್‌ವಾಲ್‌ ಸೇರಿ ಬಹು ತಾರಾಗಣವೇ ಇದೆ. ಮಗನ ಚಿತ್ರವನ್ನು ಸ್ವತಃ ತಂದೆ ಮೋಹನ್ ಬಾಬು ನಿರ್ಮಿಸುತ್ತಿರುವ ಈ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾರತೀಯ ಭಾಷೆಗಳಿಗೂ ಈ ಚಿತ್ರ ಡಬ್‌ ಆಗಿ ರಿಲೀಸ್‌ ಆಗಲಿದೆ. ಡಿಸೆಂಬರ್‌ನಲ್ಲಿ ಕಣ್ಣಪ್ಪ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ಪ್ಲಾನ್‌ ಮಾಡಿದೆ.

ಎವಿಎ ಎಂಟರ್‌ಟೈನ್‌ಮೆಂಟ್ಸ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಬ್ಯಾನರ್‌ಗಳಲ್ಲಿ ನೂರಾರು ಕೋಟಿ ಬಜೆಟ್‌ನಲ್ಲಿ ದೊಡ್ಡ ಕ್ಯಾನ್ವಾಸ್‌ನೊಂದಿಗೆ ಮೂಡಿಬರುತ್ತಿರುವ ಈ ಸಿನಿಮಾದ ಶೂಟಿಂಗ್‌ ಬಹುತೇಕ ಮುಗಿದಿದ್ದು, ವಿಎಫ್‌ಎಕ್ಸ್‌ ಕೆಲಸಕ್ಕೆ ಇಡೀ ತಂಡ ಹೆಚ್ಚಿನ ಶ್ರಮ ಹಾಕುತ್ತಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor