#Aatasamanu ಆಟ ಸಾಮಾನು ಟೀಸರ್ ಬಿಡುಗಡೆ
*ಟೈಟಲ್ ಟೀಸರ್ ನಲ್ಲೇ ನೋಡುಗರ ಮನ ಗೆಲ್ಲುತ್ತಿದೆ “ಆಟ ಸಾಮಾನು”* ..
ಮಧು ಕಲ್ಯಾಣ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರ
“ಆಟ ಸಾಮಾನು”. ಇತ್ತೀಚೆಗೆ ಈ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಯಿತು. ನಿವೃತ್ತ ಐ ಎ ಎಸ್ ಅಧಿಕಾರಿ ಡಾ||ಸಿ.ಸೋಮಶೇಖರ್ ಟೈಟಲ್ ಟೀಸರ್ ಅನಾವರಣ ಮಾಡಿದರು. ವಿವಿಧ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನಾನು ಈ ಹಿಂದೆ ಎರಡು ಚಿತ್ರಗಳನ್ನು ನಿರ್ಮಿಸಿದ್ದೆ. ” ಆಟ ಸಾಮಾನು” ನನ್ನ ಮೂರನೇ ಚಿತ್ರ. ಈ ಚಿತ್ರವನ್ನು “ಬಂಧು ಮಿತ್ರರ” ಜೊತೆ ಸೇರಿ ನಿರ್ಮಿಸುತ್ತಿದ್ದೇನೆ ಹಾಗೂ ನಿರ್ದೇಶನ ಕೂಡ ಮಾಡುತ್ತಿದ್ದೇನೆ. “ಆಟ ಸಾಮಾನು” ಕ್ರೀಡಾ ಕಥಾಹಂದರ ಹೊಂದಿರುವ ಮಹಿಳಾ ಪ್ರಧಾನ ಚಿತ್ರ. ನಮ್ಮ ಮನೆ ಬಳಿ ಹೊಸ ಕಟ್ಟಡ ಕಟ್ಟುತ್ತಿದ್ದಾರೆ. ಅಲ್ಲಿ ಕೆಲಸ ಮಾಡುವ ಮಕ್ಕಳು ಮರಳು, ಇಟ್ಟಿಗೆ ಹಾಗೂ ಸೀಮೆಂಟ್ ಜೊತೆ ಆಡುತ್ತಾರೆ. ಎದುರಿಗೆ ಶ್ರೀಮಂತರ ಮನೆ ಇದೆ. ಅಲ್ಲಿ ಮಕ್ಕಳು ಆಟವಾಡಲು ಸಕಲ ಆಟಿಕೆಗಳು ಇದೆ. ಅವರು ಆಡುತ್ತಿರುವುದನ್ನು ನೋಡಿದ ಕಾರ್ಮಿಕರ ಮಗು ಕಣ್ಣೀರು ಸುರಿಸುತ್ತಾ ನಿಂತಿರುತ್ತದೆ. ಆ ಮಗುವನ್ನು ನೋಡಿದ ನನ್ನ ಮಡದಿ ಆ ಮಗುವಿಗೆ ಕೆಲವು “ಆಟ ಸಾಮಾನು” ತಂದು ಕೊಡುತ್ತಾರೆ. ಚಿತ್ರಕ್ಕೆ ಈ ಶೀರ್ಷಿಕೆಯಿಡಲು ನನ್ನ ಮಡದಿಯೇ ಸ್ಪೂರ್ತಿ ಎನ್ನಬಹುದು. ಇದನ್ನು ಟೀಸರ್ ನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಮುಂದೆ ಚಿತ್ರದಲ್ಲಿ ಅದೇ ಹುಡುಗಿ ಕ್ರೀಡಾಲೋಕದಲ್ಲಿ ದೊಡ್ಡ ಸಾಧನೆ ಮಾಡುತ್ತಾಳೆ. ಇದು ಕಥೆಯ ಎಳೆ. ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರಿನಲ್ಲೇ ಚಿತ್ರೀಕರಣವಾಗಲಿದೆ. ಕಲಾವಿದರ ಆಯ್ಕೆ ನಡೆಯುತ್ತಿದೆ ಎಂದು ಮಧು ಕಲ್ಯಾಣ್ ಚಿತ್ರದ ಕುರಿತು ವಿವರಣೆ ನೀಡಿದರು.
ಬಿಲ್ಡಪ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸ್ಟಿಲ್ ವೆಂಕಟೇಶ್ ಛಾಯಾಗ್ರಹಣ, ಪ್ರದ್ಯೋತನ್ ಸಂಗೀತ ನಿರ್ದೇಶನ ಹಾಗೂ ಉಮೇಶ್ ಆರ್ ಬಿ ಅವರ ಸಂಕಲನವಿದೆ.