“45” Movie RELEASE ON AUGAST 15TH. ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಬಹು ನಿರೀಕ್ಷಿತ “45” ಚಿತ್ರ .

ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಬಹು ನಿರೀಕ್ಷಿತ “45” ಚಿತ್ರ .

ವಿಭಿನ್ನ ವಿಡಿಯೋ ಮೂಲಕ ಚಿತ್ರದ ಬಿಡುಗಡೆ ದಿನಾಂಕ ತಿಳಿಸಿದ ಚಿತ್ರತಂಡ .

ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ‌ ಹಾಗೂ 2025ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ “45” ಚಿತ್ರ ಆಗಸ್ಟ್ 15, ಸ್ವಾತಂತ್ರ್ಯ ದಿನೋತ್ಸವದಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಸಾಮಾನ್ಯವಾಗಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತಾರೆ. ಆದರೆ “45” ಚಿತ್ರತಂಡ ವಿಭಿನ್ನವಾಗಿ ದಿನಾಂಕ ಘೋಷಣೆ ಮಾಡಿದೆ. ಡೇಟ್ ಅನೌನ್ಸ್ ಮೆಂಟ್ ಗಾಗಿಯೇ ನಿರ್ದೇಶಕ ಅರ್ಜುನ್ ಜನ್ಯ ಪ್ರಜ್ವಲ್ ಅರಸ್ ಎಂಬ ಯುವ ಪ್ರತಿಭೆಯಿಂದ 3D ತಂತ್ರಜ್ಞಾನದಲ್ಲಿ ವಿಭಿನ್ನ ವಿಡಿಯೋ ಮಾಡಿಸಿದ್ದಾರೆ. ತಾಂತ್ರಿಕ ಶ್ರೀಮಂತಿಕೆಯಿಂದ ಕೂಡಿರುವ ಈ ವಿಡಿಯೋದಲ್ಲಿ ಸ್ಕೂಟರ್ ಏರಿ ಬರುವ ಶಿವರಾಜಕುಮಾರ್ ಅವರು , ಆಕ್ರಮಣಕಾರರನ್ನು ಶೂಟ್ ಮಾಡುತ್ತಾ ಬರುತ್ತಿರುತ್ತಾರೆ. ಕೊನೆಗೆ ಒಂದು ಗುಡ್ಡವನ್ನು ಶೂಟ್ ಮಾಡಿದಾಗ ಅದು ಸಿಡಿದು, ಬಂಡೆಯಲ್ಲಿ ಮೂರು ನಾಯಕ ನಟರ ಭಾವಚಿತ್ರ ಮೂಡಿ, ಬಿಡುಗಡೆಯ ದಿನಾಂಕ ಘೋಷಣೆಯಾಗುತ್ತದೆ.

ಕನ್ನಡದಲ್ಲಿ ಈ ತರಹದ ಪ್ರಯತ್ನ ತೀರ ಅಪರೂಪ ಎನ್ನಬಹುದು. ಸ್ಕೂಟರ್ ಓಡಿಸುತ್ತಾ ಬರುವ ಶಿವಣ್ಣ ಅವರ ಸ್ಟೈಲಿಶ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಡಿಯೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆಯಾಗಿ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಚಿತ್ರದ ಡೇಟ್ ಅನೌನ್ಸ್ ಮಾಡಲು ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ ಸಚಿವರಾದ ರಾಮಲಿಂಗ ರೆಡ್ಡಿ, ಕೆ.ವಿ.ಎನ್ ಸಂಸ್ಥೆಯ ವೆಂಕಟ್ ನಾರಾಯಣ್, ಮಾಜಿ ಶಾಸಕರಾದ ರಾಮಚಂದ್ರೇಗೌಡ, ಡಾ. ಸಂಜಯ್ ಗೌಡ, ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಛಾಬ್ರಿಯಾ, ಆನಂದ್ ಛಾಬ್ರಿಯಾ, ಕೆ.ಮಂಜು, ಇಂದ್ರಜಿತ್ ಲಂಕೇಶ್, ಕಿರಣ್ ಭರ್ತೂರ್, ಶ್ರೇಯಸ್ ಮಂಜು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ನಿರ್ಮಾಪಕ ರಮೇಶ್ ರೆಡ್ಡಿ ಅವರ ಮಗ ಸೂರಜ್ ಅವರೆ ಚಿತ್ರದ ಬಿಡುಗಡೆ ದಿನಾಂಕ ತಿಳಿಸುವ ವಿಡಿಯೋ ಬಿಡುಗಡೆ ಮಾಡಿದರು. ಸೂರಜ್ ಅವರ ಹುಟ್ಟುಹಬ್ಬದ ದಿನವೇ ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು ವಿಶೇಷ. ಆನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಿರ್ಮಾಪಕ ಎಂ.ರಮೇಶ್ ರೆಡ್ಡಿ ಮಾತನಾಡಿ, ಚಿತ್ರದಲ್ಲಿ ಕಂಟೆಂಟ್ ಹೇಗೆ ಇದೆ ಎನ್ನುವುದು ಮುಖ್ಯ. ಚಿತ್ರ 1000 ಕೋಟಿ ಮಾಡುತ್ತೋ, 100 ಕೋಟಿ ರೂಪಾಯಿ ಗಳಿಸುತ್ತೋ ಅಥವಾ 50 ಕೋಟಿ ಮಾಡುತ್ತೋ ದೇವರಿಗೆ ಗೊತ್ತು. ಆದರೆ ಚಿತ್ರ ಮೂಡಿ ಬಂದಿರುವ ಬಗೆ ಹಾಗೂ ಚಿತ್ರದ ಬಗೆಗಿನ ಕುತೂಹಲ ನೋಡಿದರೆ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಅಂತ ಹೇಳಬಹುದು. ಚಿತ್ರ ಮತ್ತು ಕಥೆಗೆ ಎಷ್ಟು ಬಂಡವಾಳ ಬೇಕೋ ಅಷ್ಟು ಹಾಕಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಚಿತ್ರಕ್ಕೆ ಇರಲಿ ಎಂದು ಹೇಳಿದರು.

ನಿರ್ದೇಶಕ ಅರ್ಜುನ್ ಜನ್ಯ ಮಾತನಾಡುತ್ತಾ, 45 ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಡಬ್ಬಿಂಗ್ ಸೇರಿದಂತೆ ಎಲ್ಲಾ ಕೆಲಸ ಮುಗಿದಿದೆ. ಚಿತ್ರದಲ್ಲಿ ವಿ ಎಫ್ ಎಕ್ಸ್ ಕೆಲಸ ತುಂಬಾ ಇದೆ. ಕೆನಡಾದ ಹೆಸರಾಂತ MARZ ಸಂಸ್ಥೆ ವಿ ಎಫ್ ಎಕ್ಸ್ ಮಾಡಲಿದೆ. ಮೇ ತಿಂಗಳ ಅಂತ್ಯದ ವೇಳೆಗೆ ಗ್ರಾಫಿಕ್ ಕೆಲಸ ಮುಗಿಯಲಿದೆ. ಆನಂತರ ಎರಡು ತಿಂಗಳು ಸಮಯವನ್ನು ಇಟ್ಟುಕೊಂಡು ಆಗಸ್ಟ್ 15 ಕ್ಕೆ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದೇವೆ. ಮೊದಲ ನಿರ್ದೇಶನದಲ್ಲೇ ಮಲ್ಟಿಸ್ಟಾರರ್ ಸಿನಿಮಾ ಮಾಡಿದ್ದೇನೆ ಎಂದು ಈಗಲೂ ನಂಬಲಾಗುತ್ತಿಲ್ಲ‌. ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರಂತಹ ಮಹಾನ್ ಕಲಾವಿದರು ನನ್ನ ಚಿತ್ರದಲ್ಲಿ ನಟಿಸಿದ್ದಾರೆ ಎಂದರೆ ಈಗಲೂ ಆಶ್ಚರ್ಯವಾಗುತ್ತಿದೆ. ಚಿತ್ರ ಚೆನ್ನಾಗಿ ಮೂಡಿಬರಲು ನಿರ್ಮಾಪಕರ ಹಾಗೂ ಚಿತ್ರತಂಡದ ಸಹಕಾರವೇ ಕಾರಣ ಎಂದರು.

ನಿರ್ದೇಶಕ ಮತ್ತು ನಿರ್ಮಾಪಕರ ಕಾಂಬಿನೇಷನ್ ಅದ್ಭುತ. ನಿರ್ದೇಶಕ ಅರ್ಜುನ್ ಜನ್ಯ ಸಿನಿಮಾ ಮಾಡಿದ ಪರಿ ಮೆಚ್ಚುವಂತದ್ದು. ಈ ಸಮಾರಂಭ ನೋಡಿದರೆ ಚಿತ್ರದ ದಿನಾಂಕ ಪ್ರಕಟಣೆ ಮಾಡುವ ಸಮಾರಂಭದ ಹಾಗಿಲ್ಲ. ಬದಲಾಗಿ ಚಿತ್ರದ ಸಕ್ಸಸ್ ಮೀಟ್ ನಂತಿದೆ. ಶಿವಣ್ಣ ಅವರಿಗೆ ಎದುರು ನೋಡುತ್ತಿದ್ದೇವೆ. ಬೇಗ ಬನ್ನಿ ಎಂದರು ನಟ ಉಪೇಂದ್ರ.

ನಟ ರಾಜ್ ಬಿ ಶೆಟ್ಟಿ ಮಾತನಾಡಿ ಕನ್ನಡಿಗನಾಗಿ, ಕನ್ನಡ ಸಿನಿಮಾ ಪ್ರೇಕ್ಷಕನಾಗಿ 45 ಚಿತ್ರ ಬಿಡುಗಡೆಗಾಗಿ ಎದುರು ನೋಡುತ್ತಿದ್ದೇನೆ. ಉತ್ತಮ ತಂತಜ್ಞರ ಜೊತೆ ಕೆಲಸ ಮಾಡಿದ್ದು ನನ್ನ ಭಾಗ್ಯ. ಈ ಚಿತ್ರದಲ್ಲಿ ಕೆಲಸ ಮಾಡಲ್ಲ ಎಂದು ಅರ್ಜುನ್ ಜನ್ಯ ಅವರ ಬಳಿ ಹೇಳಿದ್ದೆ. ಏಕೆಂದರೆ ನಾನು ಚಿತ್ರ ನಿರ್ದೇಶನ ಮಾಡಬೇಕಾಗಿದೆ. ಅದರಿಂದ ಈ ಚಿತ್ರಕ್ಕೆ ತಡೆ ಆಗಬಾರದು ಎನ್ನುವದಷ್ಟೇ ನನ್ನ ಉದ್ದೇಶವಾಗಿತ್ತು. “45” ಚಿತ್ರ ಮೂಡಿ ಬಂದಿರುವ ಪರಿ ಆದ್ಭುತ. ಚಿಕ್ಕ ಕಲಾವಿದನಿಗೂ ಕೂಡ ಹೆಚ್ಚಿನ ಅವಕಾಶ ನೀಡಿದ ಶಿವಣ್ಣ ಮತ್ತು ಉಪೇಂದ್ರ ಅವರ ಅಭಿಮಾನಿಯಾಗಿ ಈ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಹೇಳಿದರು.

ಸಾಹಸ ನಿರ್ದೇಶಕರಾದ ಡಾ.ರವಿವರ್ಮ, ಡಿಫರೆಂಟ್ ಡ್ಯಾನಿ, ಛಾಯಾಗ್ರಾಹಕ ಸತ್ಯ ಹಗ್ಡೆ ಸೇರಿದಂತೆ ಚಿತ್ರತಂಡದ ಸದಸ್ಯರು ಮತ್ತು ಗಣ್ಯರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor