ಬೆಂಗಳೂರಿನಲ್ಲಿ ಸಂಕಷ್ಟದಲ್ಲಿರುವ ಬೀದಿ ಶ್ವಾನಗಳು ಮತ್ತು ಬೆಕ್ಕುಗಳ ರಕ್ಷಣೆಗಾಗಿ ಪ್ರಾಣಾ ಸಂಸ್ಥೆಯೊಂದಿಗೆ ಟೆಕಿಯಾನ್ ಸಹಭಾಗಿತ್ವ
ಬೆಂಗಳೂರಿನಲ್ಲಿ ಸಂಕಷ್ಟದಲ್ಲಿರುವ ಬೀದಿ ಶ್ವಾನಗಳು ಮತ್ತು ಬೆಕ್ಕುಗಳ ರಕ್ಷಣೆಗಾಗಿ ಪ್ರಾಣಾ ಸಂಸ್ಥೆಯೊಂದಿಗೆ ಟೆಕಿಯಾನ್ ಸಹಭಾಗಿತ್ವ
ಬೆಂಗಳೂರು, ಫೆಬ್ರವರಿ 22, 2024
ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನ ಸಂಸ್ಥೆ ಟೆಕಿಯಾನ್, ಬೆಂಗಳೂರಿನ ಬ್ರೂಕ್‌ಫೀಲ್ಡ್ ಮತ್ತು ವೈಟ್‌ಫೀಲ್ಡ್ ಪ್ರದೇಶಗಳಲ್ಲಿ ಬೀದಿ ಶ್ವಾನಗಳು ಮತ್ತು ಬೆಕ್ಕುಗಳ ವೈದ್ಯಕೀಯ ತುರ್ತು ಚಿಕಿತ್ಸೆಯ ಆಂಬ್ಯುಲೆನ್ಸ್ ಸೇವೆಗಾಗಿ ಪ್ರಾಣಾ ಅನಿಮಲ್ ಫೌಂಡೇಶನ್‌ನೊಂದಿಗೆ ಸಹಾಯಹಸ್ತ ನೀಡಿದೆ.
ನಾಯಿ ಬೆಕ್ಕುಗಳ ಯೋಗಕ್ಷೇಮ ಕುರಿತು ಪರಿಣತಿ ಹೊಂದಿರುವ ಪ್ರಾಣಾ ಅನಿಮಲ್ ಫೌಂಡೇಶನ್ ಸ್ಥಾಪಕರಾದ ಬಹುಭಾಷಾ ನಟಿ ಸಂಯುಕ್ತಾ ಹೊರನಾಡ್ ಅವರ ಉಪಸ್ಥಿತಿಯಲ್ಲಿ ಟೆಕಿಯಾನ್ ಸಂಸ್ಥೆಯ ಪ್ರಧಾನ ಮಾನವ ಸಂಪನ್ಮೂಲಾಧಿಕಾರಿ ರಾಣಾ ರಾಬಿಲಾರ್ಡ್ ಅವರು 24×7 ಆಂಬ್ಯುಲೆನ್ಸ್ ಸೇವೆಗೆ ಕೀಲಿ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಣಾ ರಾಬಿಲಾರ್ಡ್ ಅವರು “ಈ ವಿಶಿಷ್ಟ ಸಾಮಾಜಿಕ ಜವಾಬ್ದಾರಿ (CSR) ಕಾರ್ಯಕ್ಕಾಗಿ ಪ್ರಾಣಾ ಫೌಂಡೇಶನ್ ಜೊತೆ ತೊಡಗಿಸಿಕೊಳ್ಳುತ್ತಿರುವುದು ಸಂತೋಷವಾಗಿದೆ. ನಮ್ಮ ಆಲೋಚನೆ ಮತ್ತು ಪ್ರಾಣಾ ಫೌಂಡೇಶನ್ ಉದ್ದೇಶ ಎರಡಕ್ಕೂ ಸಾಮ್ಯತೆ ಇದೆ. ಉತ್ತಮ ಆರೋಗ್ಯ, ಯೋಗಕ್ಷೇಮ, ಶಿಕ್ಷಣ ಮತ್ತು ಸಮಾನತೆ ನಮ್ಮ ಮೊದಲನೇ ಆದ್ಯತೆ, ನಮ್ಮ ಈ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮವು (CSR) ವಿಶ್ವಸಂಸ್ಥೆಯ ಸಮರ್ಥನೀಯ ಅಭಿವೃದ್ಧಿ ಗುರಿಗಳನ್ನು (SDG’s) ಅನುಸರಿಸುತ್ತದೆ ಮತ್ತು ಅರ್ಥಪೂರ್ಣ ರೀತಿಯಲ್ಲಿ ಕೊಡುಗೆ ನೀಡಲು ನಾವು ಸಿದ್ದರಿದ್ದೇವೆ” ಎಂದು ಹೇಳಿದರು.
ಆಂಬ್ಯುಲೆನ್ಸ್ ಸೇವೆಯು ಬ್ರೂಕ್‌ಫೀಲ್ಡ್ ಮತ್ತು ವೈಟ್‌ಫೀಲ್ಡ್ ಪ್ರದೇಶದಲ್ಲಿರುವ ಬೀದಿ ಶ್ವಾನಗಳ ಮತ್ತು ಬೆಕ್ಕುಗಳ ಸಂಕಷ್ಟ ನಿವಾರಣೆಯ ಗುರಿ ಹೊಂದಿದೆ. ಸಾರ್ವಜನಿಕರು ಪ್ರಾಣಾ ಸಹಾಯವಾಣಿ +919108819998 ಗೆ ಕರೆ ಮಾಡಿ ತೊಂದರೆಗೆ ಒಳಗಾಗಿರುವ ಬೀದಿ ಶ್ವಾನಗಳ ಮತ್ತು ಬೆಕ್ಕುಗಳ ಬಗ್ಗೆ ಮಾಹಿತಿ ನೀಡಬಹುದು. ಪ್ರಾಣಾ ಸಂಸ್ಥೆಯ ಸ್ವಯಂಸೇವಕರು ತಕ್ಷಣದ ಕ್ರಮ ಕೈಗೊಂಡು ಚಿಕಿತ್ಸೆ ಮತ್ತು ಆರೈಕೆಗಾಗಿ ಜೆ ಪಿ ನಗರದಲ್ಲಿರುವ ಚಿಕಿತ್ಸಾ ಕೇಂದ್ರಕ್ಕೆ ಸಾಗಿಸುತ್ತಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಯುಕ್ತಾ ಹೊರನಾಡ್ “ಇಂತಹ ಸದುದ್ದೇಶಕ್ಕಾಗಿ ನಮ್ಮೊಂದಿಗೆ ಭಾಗಿಯಾಗಿರುವ ಟೆಕಿಯಾನ್ ಸಂಸ್ಥೆಗೆ ಧನ್ಯವಾದಗಳು. ತೊಂದರೆಗೆ ಒಳಗಾಗಿರುವ ಸಾಕುಪ್ರಾಣಿಗಳ, ವಿಶೇಷವಾಗಿ ನಾಯಿಗಳು ಮತ್ತು ಬೆಕ್ಕುಗಳ ಯೋಗಕ್ಷೇಮ ಪ್ರಮುಖ ಆದ್ಯತೆಯಾಗಬೇಕು. ಕಷ್ಟದಲ್ಲಿರುವ ನಾಯಿಗಳು ಮತ್ತು ಬೆಕ್ಕುಗಳನ್ನು ರಕ್ಷಿಸಲು ನಮಗೆ ಬ್ರೂಕ್‌ಫೀಲ್ಡ್ ಮತ್ತು ವೈಟ್‌ಫೀಲ್ಡ್ ನಿವಾಸಿಗಳಿಂದ ನಿಯಮಿತವಾಗಿ ಕರೆಗಳು ಬರುತ್ತವೆ ಮತ್ತು ಅವರ ಅಸಹಾಯಕತೆ ಹೇಳ್ತಾರೆ, ದುರದೃಷ್ಟವಶಾತ್, ಆ ಪ್ರದೇಶಗಳಲ್ಲಿ ಅನಿಮಲ್ ಆಂಬ್ಯುಲೆನ್ಸ್ ಇಲ್ಲದ ಕಾರಣಕ್ಕೆ ಸಕಾಲಕ್ಕೆ ಆ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಟೆಕಿಯಾನ್ ಸಂಸ್ಥೆಯವರು ನಮ್ಮನ್ನು ಬೆಂಬಲಿಸಿದ್ದಾರೆ, ನಾವು ಸಂಸ್ಥೆಗೆ ಕೃತಜ್ಞರಾಗಿದ್ದೇವೆ” ಎಂದು ಹೇಳಿದರು.
ಸಹಭಾಗಿತ್ವ ಕುರಿತು ಟೆಕಿಯಾನ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ನಿರ್ದೇಶಕರಾದ ಶ್ರೀಮತಿ ಸೌಮ್ಯ ಮಲ್ಲಯ್ಯ ಮಾತನಾಡುತ್ತಾ “ನೋವಿನಿಂದ ನರಳುತ್ತಿರುವ ಮತ್ತು ಅಪಘಾತಕ್ಕೀಡಾದ ನಾಯಿ ಮತ್ತು ಬೆಕ್ಕುಗಳ ತಕ್ಷಣದ ಚಿಕಿತ್ಸೆಗೆ ಸಾರಿಗೆ ವ್ಯವಸ್ತೆ ಬಹಳ ಮುಖ್ಯ, ಇದು ನಮಗೆ ಗೌರವಾರ್ಥ ಕಾರ್ಯವಾಗಿದೆ. ಆರೋಗ್ಯ ಮತ್ತು ಸುರಕ್ಷತೆಯ ಕಾಳಜಿ ತಿಳಿಸುವ ಮೂಲಕ ಸಂಯುಕ್ತಾ ಅವರ ಈ ಸೇವೆಯನ್ನು ಬೆಂಬಲಿಸುತ್ತೇವೆ ಹಾಗೂ ಮುಂಬರುವ ದಿನಗಳಲ್ಲಿ ಇಂತಹ ಅನೇಕ ಸಾಮಾಜಿಕ ಕಾರ್ಯಗಳನ್ನು ಇತರೆ ಸರ್ಕಾರೇತರ ಸಂಸ್ಥೆಗಳನ್ನೂ ಸಹ ನಾವು ಬೆಂಬಲಿಸುತ್ತೇವೆ” ಎಂದು ಈ ಸಂದರ್ಭದಲ್ಲಿ ಹೇಳಿದರು.
ಟೆಕಿಯಾನ್ ಮತ್ತು ಪ್ರಾಣಾ ಜಂಟಿಯಾಗಿ ಬ್ರೂಕ್‌ಫೀಲ್ಡ್ ಮತ್ತು ವೈಟ್‌ಫೀಲ್ಡ್ನಲ್ಲಿ ಕೋರ್ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಸಲಿವೆ, ಲಸಿಕೆಗಳನ್ನು ನೀಡಲಾಗುತ್ತದೆ ಮತ್ತು ಪ್ರಾಣಿ ಹಕ್ಕುಗಳ ಜಾಗೃತಿ ಅಭಿಯಾನಗಳನ್ನು ಆಯೋಜಿಸಲಿವೆ. ಬೆಂಗಳೂರಿನ ಇತರ ಪ್ರದೇಶಗಳಲ್ಲಿ ಶುಶ್ರೂಷೆ aಅಗತ್ಯತೆ ಇರುವ ನಾಯಿ ಮತ್ತು ಬೆಕ್ಕುಗಳ 24×7 ಆಂಬ್ಯುಲೆನ್ಸ್ ಸೇವೆಯನ್ನು ನಿರ್ವಹಿಸಲಿವೆ. ಪ್ರಾಣಿಗಳ ದತ್ತು ಪ್ರಕ್ರಿಯೆಗಳನ್ನು ಸಹ ಆಯೋಜಿಸಲಾಗುತ್ತದೆ. ಇದರ ಶಿಕ್ಷಣ ಮತ್ತು ಜಾಗೃತಿ ಅಭಿಯಾನಗಳನ್ನು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಪ್ರಾಣಿ ಸುರಕ್ಷಾ ಪಾಲಕ ಅನಿರುದ್ಧ ರವೀಂದ್ರ ಅವರ ನೇತೃತ್ವದಲ್ಲಿ ನಡೆಸಲಾಗುತ್ತದೆ.
ಟೆಕಿಯಾನ್ ಭಾರತದಲ್ಲಿ ಹಲವಾರು ವರ್ಷಗಳಿಂದ ಸಾಮಾಜಿಕ ಜವಾಬ್ದಾರಿ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದೆ, ಸಮಾಜದಲ್ಲಿ ಬಡ ವಿದ್ಯಾರ್ಥಿಗಳು, ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳು, ಹೆಣ್ಣುಮಕ್ಕಳು, ಅನಾಥರು, ಹೆಚ್‌ಐವಿ ಸೋಂಕಿತ ಪೋಷಕರ ಮಕ್ಕಳು ಮತ್ತು ಗ್ರಾಮೀಣ ಕ್ರೀಡಾ ಪ್ರತಿಭೆಗಳು ಸೇರಿದಂತೆ ಅನೇಕರಿಗೆ ಸಹಾಯಹಸ್ತ ನೀಡಿದೆ. ಟೆಕಿಯಾನ್ ಬೆಂಗಳೂರಿನ ಸಮೀಪದಲ್ಲಿರುವ ಕೆರೆಗಳನ್ನು ಪುನರುಜ್ಜೀವನಗೊಳಿಸಿದೆ ಮತ್ತು ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದ ಮೂಲಕ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕವಾಗಿ ಪ್ರೋತ್ಸಾಹಿಸಿದೆ.
ಹೆಚ್ಚಿನ ಮಾಹಿತಿಗಾಗಿ:
ಸಂಯುಕ್ತಾ, ಪ್ರಾಣ: +91 99720 99170