*ಪವಿತ್ರ ಲೋಕೇಶ್ ಹಾಗೂ ನರೇಶ್ ಗೆ ಮತ್ತೆ ಮದುವೆಯಂತೆ…?*

*’ಮತ್ತೆ ಮದುವೆ’ ಬಗ್ಗೆ ಏನಂದ್ರೂ ಪವಿತ್ರಾ ಲೋಕೇಶ್-ನರೇಶ್…?*

ಟಾಲಿವುಡ್‌ ನಟ ನರೇಶ್‌ ಕೃಷ್ಣ ಹಾಗೂ ಪವಿತ್ರಾ ಲೋಕೇಶ್‌ ಅಭಿನಯದ ಮತ್ತೆ ಮದುವೆ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಚಿತ್ರ ರಿಲೀಸ್ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ
ಪವಿತ್ರಾ ಹಾಗೂ ನರೇಶ್‌ ಪ್ರಮೋಷನ್‌ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಜೋಡಿ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡರು.

ಇದು ನಿಮ್ಮ ಜೀವನದ ರಿಯಲ್‌ ಲೈಫ್‌ ಸ್ಟೋರಿನಾ? ಟೀಸರ್‌ ನೋಡಿದರೆ ಇದುವರೆಗೂ ನಡೆದ ಘಟನೆಗಳನ್ನೇ ಅಲ್ಲಿ ತೋರಿಸಲಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪವಿತ್ರಾ ಲೋಕೇಶ್, ”ಒಂದೆರಡು ನಿಮಿಷದ ಟೀಸರ್‌ ಟ್ರೇಲರ್‌ ನೋಡಿ ಯಾವ ನಿರ್ಧಾರಕ್ಕೂ ಬರಬೇಡಿ, ಸಿನಿಮಾ ನೋಡಿದರೆ ನಾವು ಏನು ಹೇಳಲು ಹೊರಟಿದ್ದೇವೆ ಎನ್ನುವುದು ಅರ್ಥವಾಗುತ್ತದೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಲು ಹೊರಟಿದ್ದೇವೆ. ಈಗಲೇ ಸಿನಿಮಾ ಕಥೆಯನ್ನು ಹೇಳಲು ಸಾಧ್ಯವಿಲ್ಲ. ನಮ್ಮ ಜೀವನಕ್ಕೂ ಸಿನಿಮಾಗೂ ಏನೂ ಸಂಬಂಧ ಇಲ್ಲ. ಸಿನಿಮಾ ಬೇರೆ, ವೈಯಕ್ತಿಕ ಜೀವನವೇ ಬೇರೆ.

ನನ್ನ‌ ವೃತ್ತಿಗೂ ವೈಯಕ್ತಿಕ ವಿಚಾರಕ್ಕೂ ಲಿಂಕ್‌ ಮಾಡುವುದು ನನಗೆ ಇಷ್ಟವಿಲ್ಲ. ನನ್ನನ್ನು ಒಬ್ಬ ನಟಿಯಾಗಿ ಮಾತ್ರ ನೋಡಿ, ಬೇಕಂತಲೇ ಯಾರೂ ಸುದ್ದಿಯಾಗುವುದಿಲ್ಲ. 1994ನಲ್ಲಿ ಅಂಬರೀಶ್‌ ಅವರು ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಅಲ್ಲಿಂದ ಇದುವರೆಗೂ ನಾನು ಯಾವುದೇ ವಿಚಾರವನ್ನು ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡಿರಲಿಲ್ಲ. ದುರುದ್ದೇಶಪೂರ್ವಕವಾಗಿ ನನ್ನ ಹೆಗಲ ಮೇಲೆ ಗನ್‌ ಇಟ್ಟು ನರೇಶ್‌ ಅವರನ್ನು ಶೂಟ್‌ ಮಾಡುವ ಪಿತೂರಿ ನಡೆದಿತ್ತು” ಎಂದು ಪವಿತ್ರಾ ಹೇಳಿದರು.

ನರೇಶ್‌ ಮಾತನಾಡಿ, ”ಹಿಂದೆ ದೇವಾನುದೇವತೆಗಳೇ ಬಹುಪತ್ನಿತ್ವದಲ್ಲಿದ್ದರು. ರಾಜರೂ ಒಂದಕ್ಕಿಂತ ಹೆಚ್ಚು ಮದುವೆ ಆಗುತ್ತಿದ್ದರು. ಅದೆಲ್ಲವನ್ನೂ ನಾವು ಸ್ವೀಕರಿಸಿ, ಒಪ್ಪಿಕೊಂಡಿದ್ದೇವೆ. ಈಗಲೂ ಸುಪ್ರೀಂಕೋರ್ಟ್‌ ಲಿವ್‌ ಇನ್‌ ರಿಲೇಶನ್‌ಶಿಪ್‌ ತಪ್ಪಲ್ಲ ಎಂದು ತೀರ್ಪು ನೀಡಿದೆ. ಅಂತದ್ದರಲ್ಲಿ ನಮ್ಮಿಬ್ಬರ ತಪ್ಪು ಏನಿದೆ? ನಾನಂತೂ ಸಿಂಗಲ್‌ ಅಲ್ಲ, ಪವಿತ್ರಾ ಹಾಗೂ ನಾವಿಬ್ಬರೂ ಲಿವ್‌ ಇನ್‌ ರೀಲೇಶನ್‌ಶಿಪ್‌ನಲ್ಲಿದ್ದೇವೆ ಎಂದು ಬಹಿರಂಗವಾಗಿ ಒಪ್ಪಿಕೊಂಡರು.

ಮಳ್ಳಿ ಪೆಳ್ಳಿ ಸಿನಿಮಾವನ್ನು ನರೇಶ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್‌’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಇದೀಗ ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಮೂಲಕ ಮಳ್ಳಿ ಪೆಳ್ಳಿ’ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.‌ ಮೇ 26ಕ್ಕೆ ಮಳ್ಳಿ ಪೆಳ್ಳಿ ಎಂಬ ಟೈಟಲ್ ನಡಿ ತೆಲುಗಿನಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಕನ್ನಡದಲ್ಲಿ ಇನ್ನೂ ರಿಲೀಸ್ ಡೇಟ್ ಫೈನಲ್ ಆಗಿಲ್ಲ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor