ನಿಧಿಯ ಸುತ್ತಾ,ಚಲ್ಲಾಟ, ಕಳ್ಳಾಟ, ಹೊಡೆದಾಟ
ಚಿತ್ರ ವಿಮರ್ಶೆ
Rating – 3/5.
ಚಿತ್ರ: ಅನ್ ಲಾಕ್ ರಾಘವ
ನಿರ್ಮಾಣ: ಮಂಜುನಾಥ್, ದಾಸೇಗೌಡ, ಗಿರೀಶ್ ಕುಮಾರ್.
ನಿರ್ದೇಶನ: ದೀಪಕ್ ಮಧುವನ ಹಳ್ಳಿ
ಸಂಗೀತ : ಅನೂಪ್ ಸೀಳಿನ್
ಛಾಯಾಗ್ರಹಣ :
ತಾರಾಗಣ :
ಇವನು ಮನೆ ಬೀಗ ಹೊಡೆಯುವ ಕಳ್ಳನಲ್ಲ., ಆದರೆ ಕಣ್ಣು ಮಿಟುಕಿಸುವಲ್ಲಿ ಎಂತದ್ದೇ ಬೀಗವಾದರೂ ಕಳಚಿ ಕೆಳಗಿಟ್ಟು ಲಾಲಿ ಪಪ್ ಚೀಪುತ್ತಿರುತ್ತಾನೆ.
ಒಂದು ತುದಿಯಲ್ಲಿ ಲಾಲಿ ಪಪ್ ಚೀಪಿದರೆ ಮತ್ತೊಂದು ತುದಿಯಲ್ಲಿ ಬೀಗ ತೆಗೆಯಲು ಬಳಸುತ್ತಾನೆ. ಅದಕ್ಜಾಗಿಯೇ ಚಿತ್ರದುದ್ದಕ್ಕೂ ಲಾಲಿ ಪಪ್ ಚೀಪುತ್ತಾ ಪ್ರೇಕ್ಷಕರ ಬಾಯಲ್ಲಿ ನೀರೂರಿಸುತ್ತಾನೆ.
ಇವನು ನೆನ್ನೆ ಮೊನ್ನೆ ಬೀಕ ಮುರಿಯುವ ಕೆಲಸಕ್ಕೆ ಬಿದ್ದವನಲ್ಲ, ಚಿಕ್ಕಂದಿನಿಂದಲೇ ಸ್ಕೂಲಿನಲ್ಲಿ ಕೂಡಿ ಹಾಕಿದ್ದ ಹುಡುಗಿಯನ್ನು ಅದೇ ಲಾಲಿಪಪ್ಪಿನ ಕಡ್ಡಿಯ ತುದಿಯಿಂದ ಬೀಗ ಮುರಿದಿದ್ದ, ಅದರ ಜೊತೆ ಜೊತೆಗೆ ಹುಡುಗಿಯ ಹೃದಯದ ಕದದ ಬೀಗ ತೆರೆದು ಪ್ರೀತಿಯ ಬೀಜ ಬಿತ್ತು ಬಿಟ್ಡಿದ್ದ.
ಅಲ್ಲಿಂದ ಶುರುವಾದ ಪ್ರೀತಿ ಮೊಳಕೆ ಹೊಡೆದು, ಚಿಗುರಿ, ಹೃದಯದಲ್ಲೇ ಹೆಮ್ಮರವಾದರು ಅದರ ನೆರಳಲ್ಲಿ ಹೂದುಂಬಿಯ ಸಂಗಮಕ್ಕಾಗಿ ಕಥಾ ನಾಯಕ, ನಾಯಕಿಯರು ಒದ್ದಾಡುತ್ತಾರೆ, ತಮ್ಮ ಪ್ರೀತಿಯ ನಿವೇದನೆಗೆ ಪರಿತಪಿಸುತ್ತಾರೆ.
ಇವರಿಬ್ಬರ ಮಧ್ಯೆ ದುತ್ತನೆ ಬರುವುದು ಕೊಪ್ಪರಿಗೆಯಲ್ಲಿ ತುಂಬಿರುವ ರಾಜನೊಬ್ಬನ ಗತ ವೈಭವಕ್ಕೆ ಸಾಕ್ಷಿಯಾದ ಚಿನ್ನದ ಕೊಪ್ಪರಿಗೆ.
ಈ ಕೊಪ್ಪರಿಗೆಯೇ ಚಿತ್ರದ ಮೂಲ ಬಂಡವಾಳ. ಈ ಚಿನ್ನದ ಕೊಪ್ಪರಿಗೆ ಸುತ್ತಾ ಕಥೆ ಸುತ್ತುತ್ತಾದರೂ ನಿರ್ದೇಶಕರು ಇದನ್ನು ಮತ್ತಷ್ಟು ಕ್ರಿಯಾಶೀಲತೆಯಿಂದ ಚಿತ್ರೀಕರಿಸಿದ್ದರೆ, ಚಿತ್ರದ ಓಟಕ್ಕೆ ಅಲ್ಲಲ್ಲಿ ಕುಂಟುವೆವಗಳನ್ನು ಕಡಿಮೆ ಮಾಡಿದ್ದರೆ. ಚಿತ್ರ ಇನ್ನೂ ತುಂಬಾ ಚನ್ನಾಗಿ ಮೂಡಿ ಬರುತಿತ್ತು.
ರಾಘವ ಮತ್ತು ಜಾನಕಿ ಬಾಲ್ಯದ ಗೆಳೆಯರು, ಗೆಳೆತನ ಪ್ರೇಮವಾಗಿ ಟಿಸಿಲೊಡೆದರು ತನ್ನ ಹುಡುಗಿ ಯಾರೆಂದು ರಾಘವನಿಗೆ ಗೊತ್ತಿಲ್ಲ. ಜಾನಕಿಗೆ ಗೊತ್ತಿದ್ದು ಒಂದಷ್ಟು ಅವನನ್ನು ಸತಾಯಿಸಿ ತಾನೆ ಅವಳೆಂದು ಹೇಳುವ ಸನ್ನಿವೇಶ ವನ್ನು ನಿರ್ದೇಶಕರು ಕಲರ್ ಫುಲ್ಲಾಗಿ ತೋರಿಸಬಹುದಿತ್ತು. ಭೂಮಿಯೊಳಗೆ ಸಿಕ್ಕ ಪುರಾತನ ಚಿನ್ನದ ಕೊಪ್ಪರಿಗೆಯ ಬೀಗ ತೆರೆಯಲು ನಾಯಕಿ ನಾಯಕನನ್ನು ಆಮಂತ್ರಿಸುತ್ತಾಳೆ. ಆದರೆ ಕೊಪ್ಪರಿಗೆಗಾಗಿ ಕಾದು ಕುಳಿತಿದ್ದ ಒಂದಷ್ಟು ಕಳ್ಳ ಬೆಕ್ಕುಗಳು ಅದನ್ನು ಅಪಹರಿಸುತ್ತಾರೆ. ಇಲ್ಲಿಂದ ಕಥೆ ಪ್ರೇಕ್ಷಕರಿಗೆ ಗೊತ್ತಾಗಿ ಹೋಗುತ್ತದೆ.
ನಿಧಿ ಅಪಹರಿಸಿದವರ ಬೆನ್ನ ಹತ್ತಿ ನಾಯಕ ಹೊಡೆದಾಡಿ ವಾಪಸ್ಸು ತಂದರು ಅದು ಯಾರಿಗೂ ಸಿಗುವುದಿಲ್ಲ. ಅದು ಏನಾಯ್ತು ಅನ್ನುವುದೇ ಬಾಲಿಶ ಸಸ್ಪೆನ್ಸ್.
ಕೊಪ್ಪರಿಗೆ ಹಿಂದೆ ಬಿದ್ದ ಖಳನಟ ಡೇವಿಡ್ (ಶೋಭರಾಜ್) ನಾಯಕಿ ಜಾನಕಿಯನ್ನು ಅಪಹರಿಸುತ್ತಾನೆ ಮುಂದೆ ನಡೆಯೋದು ಹಾಸ್ಯಾಸ್ಪದವಾಗಿ ರಾಮಾಯಣದ ಕಥೆ. ಸೀತೆಯ ಮತ್ತೊಂದು ಹೆಸರು ಜಾನಕಿ, ರಾಮನ ಮತ್ತೊಂದು ಹೆಸರು ರಾಘವ. ಇಲ್ಲಿ ಆಂಜನೇಯನ ಜಾಗದಲ್ಲಿ ಸಾಧುಕೋಕಿಲ ಅಭಿನಯಿಸಿದ್ದಾರೆ. ಹೊಡೆದಾಟದಲ್ಲಿ ತಲೆಗೆ ಏಟು ಬಿದ್ದು ಕನ್ನಡ ಮರೆತು, ಬೇರೆ ಅರ್ಥವಿಲ್ಲದ ಭಾಷೆಯಲ್ಲಿ ಬಡಬಡಿಸುತ್ತಾರೆ.
ರಾವಣನ ಜಾಗದಲ್ಲಿ ಕಾಮಿಡಿ ವಿಲನ್ ನಂತೆ ಪೀಟರ್ ಪಾತ್ರದಲ್ಲಿ ಅಬ್ಬರಿಸೋದು ಶೋಭರಾಜ್. ಫಿಟರ್ ಪತ್ನಿ
(ಮಂಡೋದರಿ) ಯಾಗಿ ವೀಣಾಸುಂದರ್, ನಾಯಕಿಯ ತಂದೆಯಾಗಿ ಅವಿನಾಶ್ ( ಜನಕನಾಗಿ ) ತೆರೆ ಹಂಚಿಕೊಂಡಿದ್ದಾರೆ. ಎಲ್ಲ ಪಾತ್ರಗಳನ್ನು ನಿರ್ದೇಶಕರು ತೆರೆಯ ಮೇಲೆ ತರಲು ಪ್ರಯತ್ನಿಸಿದ್ದಾರೆ.
ಇಲ್ಲಿ ಕೊನೆಗೆ ಸೀತೆ ಬಿಡುಗಡೆ, ರಾಮ ರಾವಣರ ಯುದ್ಧ, ನಿಧಿ ಎಲ್ಲಿದೆ, ಯಾರ ಕೈಸೇರುತ್ತದೆ ಹೀಗೆ ನಾನಾ ರೀತಿಯಲ್ಲಿ ಚಿತ್ರ ತೆರೆದುಕೊಂಡು ಕೊನೆಯಾಗುತ್ತದೆ.
ಮೊದಲಬಾರಿಗೆ ನಾಯಕನಾಗಿ ತೆರೆಯಮೇಲೆ ಕಾಣಿಸಿಕೊಂಡಿರುವ
ರಾಘವನ ಪಾತ್ರದಲ್ಲಿ ಮಿಲಿಂದ್ ಗೌತಮ್ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದ್ದಾರೆ.
ಗೌತಮ್ ಹೀರೋ ಮೆಟೀರಿಯಲ್ ಅನ್ನೋದಂತು ನಿಜವಾದರು ಇನ್ನೂ ಪಕ್ವವಾಗಬೇಕಿದೆ.
ಫೈಟ್ ಮತ್ತು ಡ್ಯಾನ್ಸ್ ನಲ್ಲಿ ಗಮನ ಸೆಳೆಯುತ್ತಾರೆ.
ರಚೆಲ್ ಡೇವಿಡ್ ತುಂಬಾ ಮುದ್ದಾಗಿ ಕಾಣುತ್ತಾರೆ.
ಇಲ್ಲಿ ಪ್ರಾಚ್ಯವಸ್ತು ಶೋಧನೆ ಮತ್ತು ಸಂಶೋಧನಾ ಅಧಿಕಾರಿಯಾಗಿ ಅವಿನಾಶ್ ಹಾಗೂ ಮಗಳಾಗಿ ರಚೇಲ್ ಡೇವಿಡ್ ಪಾತ್ರ ನಿರ್ವಹಿಸಿದ್ದಾರೆ.
ಚಿತ್ರದಲ್ಲಿ
ರಾಮಣ್ಣನಾಗಿ ರಮೇಶ್ ಭಟ್,
ಪೀಟರ್ ಪತ್ನಿ ಮಾಯಾ ಪಾತ್ರದಲ್ಲಿ ವೀಣಾ ಸುಂದರ್, ನಿಧಿಗಾಗಿ ಹೊಂಚು ಹಾಕುವ ವ್ಯಕ್ತಿಯ ಪಾತ್ರದಲ್ಲಿ ಸುಂದರ್, ಅಧಿಕಾರಿ ಜಗಪತಿ ಪಾತ್ರದಲ್ಲಿ ಅವಿನಾಶ್ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಅಲ್ಲದೆ ಧರ್ಮಣ್ಣ ಹಾಗೂ ಮೂಗ್ ಸುರೇಶ್ ಪಾತ್ರಗಳು ವಿಶೇಷವಾಗಿ ನಗು ತರಿಸುತ್ತವೆ. ಅನೂಪ್ ಸೀಳಿನ್ ಸಂಗೀತದಲ್ಲಿ
ಎರಡು ಹಾಡುಗಳು ಚನ್ನಾಗಿವೆ,
ಇನ್ನು ಛಾಯಾಗ್ರಾಹಕನ ಕಣ್ಣು ಪ್ರೇಕ್ಷಕರಿಗೆ ಮೋಸ ಮಾಡುವುದಿಲ್ಲ.
ರಾಮ ರಾಮಾ ರೇ’ ಚಿತ್ರದ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ಕಥೆಯನ್ನು ಎಣೆದಿದ್ದಾರೆ. ಆದರೆ ನಿರ್ದೇಶಕ ನಿರೂಪಣೆಯಲ್ಲಿ ಎಡವಿದಂತೆ ಕಾಣುತ್ತದೆ.
ಒಟ್ಟಿನಲ್ಲಿ ಮೂರು ಜನ ನಿರ್ಮಾಪಕರು ಚಿತ್ರಕ್ಕೆ ಹಣ ಸುರಿದಿದ್ದಾರೆ, ಹಾಗೆಯೇ ಪ್ರೇಕ್ಷಕರು ಈ ಸಿನಿಮಾವನ್ನು ನೋಡಿ ಗೆಲ್ಲಿಸಬೇಕಿದೆ, ಜಿತೆಗೆ ಹೊಸ ನಟ, ನಟಿಯರನ್ನು ಕೈ ಹಿಡಿದು ಬೆಳೆಸಬೇಕಿದೆ.