ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂವಾದ
*ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದಿಂದ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂವಾದ*
ಕನ್ನಡ ಚಿತ್ರರಂಗವು ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘವು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಂವಾದವೊಂದನ್ನು ಆಯೋಜಿಸಿತ್ತು. ಈ ಸಂವಾದದಲ್ಲಿ ಕನ್ನಡ ಚಲನಚಿತ್ರರಂಗದ ಹಲವು ಸಂಘ-ಸಂಸ್ಥೆಗಳ ಪ್ರಮುಖರು ಜೊತೆಗೂಡಿ, ಚಿತ್ರರಂಗ ಸದ್ಯ ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ, ಮಲ್ಟಿಪ್ಲೆಕ್ಸ್‌ಗಳಲ್ಲಿನ ದುಬಾರಿ ಪ್ರವೇಶ ದರ, ಕಡಿಮೆಯಾಗುತ್ತಿರುವ ಸ್ಟಾರ್ ನಟರ ಚಿತ್ರಗಳು, ಹೆಚ್ಚಾಗುತ್ತಿರುವ ಬಜೆಟ್, ಚಿತ್ರಗಳಲ್ಲಿ ಗುಣಮಟ್ಟದ ಕೊರತೆ … ಸೇರಿದಂತೆ ಕನ್ನಡ ಚಿತ್ರರಂಗವು ಎದುರಿಸುತ್ತಿರುವ ಹಲವು ವಿಷಯಗಳ ಬಗ್ಗೆ ಚಿತ್ರರಂಗದವರು ಮತ್ತು ಮಾಧ್ಯಮದವರು ಚರ್ಚೆ ನಡೆಸಿದೆರು.
ಈ ಸಂವಾದದಲ್ಲಿ ಮಾತನಾಡಿದ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್, ‘ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರಗಳು ಬಿಡುಗಡೆಯಾಗುತ್ತಿವೆ. ಆದರೆ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಸ್ಟಾರ್ ಚಿತ್ರಗಳನ್ನೂ ನೋಡುತ್ತಿಲ್ಲ. ಹಾಗಾಗಿ, ನಾವು ಮೊದಲು ಪ್ರೇಕ್ಷಕ ಯಾಕೆ ಚಿತ್ರಮಂದಿರದಿಂದ ದೂರ ಉಳಿಯುತ್ತಿದ್ದಾನೆ, ಅವನನ್ನು ಸೆಳೆಯಲು ಏನು ಮತ್ತು ಎಂತಹ ಕಥೆಯನ್ನು ಮಾಡಬೇಕು ಎಂಬ ವಿಷಯದ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕು’ ಎಂದು ಹೇಳಿದರು.
ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಮಾತನಾಡಿ, ‘ಚಿತ್ರರಂಗ ಅಂದರೆ ಮೊದಲು ಗಮನಕ್ಕೆ ಬರುವುದು ಕಲಾವಿದರು. ಅವರು ಮಾತ್ರ ತೆರೆಯ ಮೇಲೆ ಕಾಣುತ್ತಾರೆ. ಮಿಕ್ಕವರೆಲ್ಲ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಾರೆ. ಹಿಂದೆ ಡಾ. ರಾಜಕುಮಾರ್, ಕಲ್ಯಾಣ್ ಕುಮಾರ್, ಅಶ್ವತ್ಥ್, ಬಾಲಣ್ಣ, ಜಿ.ವಿ. ಅಯ್ಯರ್ ಮುಂತಾದವರೆಲ್ಲ ಬಹಳ ಕಷ್ಟಪಟ್ಟು ಚಿತ್ರರಂಗವನ್ನು ಈ ಮಟ್ಟಕ್ಕೆ ತಂದರು. ಒಂದು ಕಾರಿನಲ್ಲಿ ಎಂಟು ಜನ ಕಲಾವಿದರು ಪ್ರಯಾಣ ಮಾಡುತ್ತಿದ್ದರು. ಸಾಮೂಹಿಕ ಭೋಜನ ಪರಿಚಯಿಸಿದ್ದೇ ರಾಜಕುಮಾರ್. ಆದರೆ, ಪರಿಸ್ಥಿತಿ ಬದಲಾಗಿದೆ. ಕಲಾವಿದರೆಲ್ಲ ಅರಿತುಕೊಂಡು, ದುಂದುವೆಚ್ಚ ಮಾಡದೇ ನಿರ್ಮಾಪಕರಿಗೆ ಸಹಕಾರಿಯಾಗಿ ಚಿತ್ರ ಮಾಡಿಕೊಂಡು ಹೋಗಬೇಕು’ ಎಂದು ಹೇಳಿದರು.
ಈ ಸಂವಾದದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ. ಹರೀಶ್, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್, ಕರ್ನಾಟಕ ಚಲನಚಿತ್ರ ಒಕ್ಕೂಟದ ಅಧ್ಯಕ್ಷ ಮಹಾಬಲ, ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜೆ.ಜಿ.ಕೃಷ್ಣ, ವಿತರಕ ಮಾರ್ಸ್ ಸುರೇಶ್, ಹಿರಿಯ ನಿರ್ಮಾಪಕ ಮತ್ತು ವಿತರಕ ಎಸ್.ಎ. ಚಿನ್ನೇಗೌಡ, ಎಂ.ಎನ್. ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.