“ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಹಯೋಗದಲ್ಲಿ ಮರಳಿ ಬರುತ್ತಿದೆ ‘ಟಿವಿ ಠೀವಿ’ ಪ್ರತ್ರಿಕೆ”
*ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಹಯೋಗದಲ್ಲಿ ಮರಳಿ ಬರುತ್ತಿದೆ ‘ಟಿವಿ ಠೀವಿ’ ಪ್ರತ್ರಿಕೆ*
*ಜುಲೈ 9ರಂದು ಅದ್ದೂರಿ ಸಮಾರಂಭದಲ್ಲಿ, ಹಲವು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ* .
10 ವರ್ಷಗಳ ಹಿಂದೆ ಸುಮಾರು 15 ವರ್ಷ ಪ್ರಸಾರವಾಗಿದ್ದ ಟಿವಿ ಠೀವಿ ಪತ್ರಿಕೆ ಸಾಕಷ್ಟು ಪ್ರಶಂಸೆ ಪಡೆದಿತ್ತು. ಈಗ ಇದು ಮತ್ತೆ ಮರಳಿ ಬರುತ್ತಿದೆ. ಇದೇ ತಿಂಗಳು ಎರಡನೇ ಭಾನುವಾರದ (ಜುಲೈ 9) ರಂದು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ‘ಟಿವಿ ಠೀವಿ’ ಪತ್ರಿಕೆಯನ್ನು ಮಾನ್ಯ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಲಾಂಚ್ ಮಾಡಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (ಕೆಟಿವಿಎ) ವೆಬ್‌ಸೈಟ್‌ನ್ನು ನಟ ಪ್ರಕಾಶ್ ರೈ ಹಾಗೂ KTVA ಆ್ಯಪ್‌ನ್ನು ನಟಿ ಉಮಾಶ್ರೀ ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ KTVA ಅಧ್ಯಕ್ಷರಾದ ರವಿ ಆರ್. ಗರಣಿ ಮಾತನಾಡಿ ‘ “ಟಿವಿ ಠೀವಿ” ಪತ್ರಿಕೆಯನ್ನು ಮತ್ತೆ ಪ್ರಾರಂಭ ಮಾಡಲಾಗುತ್ತಿದೆ. ಇದು ಹತ್ತು ವರ್ಷಗಳ ಹಿಂದೆ 15 ವರ್ಷಗಳ ಕಾಲ ಪ್ರಸಾರ ಹೊಂದಿ ಸಾಕಷ್ಟು ಪ್ರಚಲಿತವಾಗಿತ್ತು. ಸದ್ಯ ನಮ್ಮ ಟಿಲಿವಿಷನ್ (ಟಿವಿ) ನಂಬಿಕೊಂಡು 25,000 ಕುಟುಂಬ ಜೀವನ ನಡೆಸುತ್ತಿದ್ದಾರೆ. ಜುಲೈ 9ರ ಕಾರ್ಯಕ್ರಮಕ್ಕೆ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ, ಪ್ರಕಾಶ್ ರಾಜ್, ಮಿಲನಾ ಪ್ರಕಾಶ್, ಉಮಾಶ್ರೀ ಅಥಿತಿಗಳಾಗಿ ಬರುತ್ತಿದ್ದಾರೆ. ಹೊಸ ರೀತಿಯಲ್ಲಿ ಟಿವಿ ಠೀವಿ ಪತ್ರಿಕೆ ಬರಲಿದ್ದು 72 ಪುಟ ಒಳಗೊಂಡಿದೆ. ಪ್ರತಿ ತಿಂಗಳು ಎರಡನೇ ಭಾನುವಾರ ಒಂದೊಂದು ಕಾರ್ಯಕ್ರಮ ಮಾಡಿ ಆ ತಿಂಗಳ ಸಂಚಿಕೆ ಬಿಡುಗಡೆ ಮಾಡುತ್ತೇವೆ. ಇದು ಡಿಜಿಟಲ್ ಹಾಗೂ ಪ್ರಿಂಟ್ ಕೂಡ ಆಗಲಿದೆ. ಹೆಚ್ಚಾಗಿ ಯುವ ಬರಹಗಾರರಿಗೆ ಅವಕಾಶ ಮಾಡಿ ಕೊಡುವ ಪ್ರಯತ್ನ ನಡೆಯುತ್ತಿದೆ. ಇದು ಖಾಸಗಿ ಪತ್ರಿಕೆ ಆದ್ದರಿಂದ ಮಾರಾಟಕ್ಕೆ ಇರುವುದಿಲ್ಲ. ಬದಲಾಗಿ ನಮ್ಮ ಸದಸ್ಯರಿಗೆ, ಲೈಬ್ರರಿ, ಸರ್ಕಾರಿ ಕಛೇರಿಗಳಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು. ಇದರಲ್ಲಿ ಎಲ್ಲಾ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್‌ಗಳ ಮಾಹಿತಿ ಜೊತೆಗೆ ಸಮಯ, ಟಿ.ಆರ್.ಪಿ ಸೇರಿದಂತೆ ಸಂಪೂರ್ಣ ಮಾಹಿತಿ ಸಿಗಲಿದೆ. ಜೊತೆಗೆ ಹೊಸ ಸೀರಿಯಲ್‌ಗಳ ಬಗ್ಗೆ ಕೂಡ ಮಾಹಿತಿ ಇರುತ್ತದೆ. ಇಂದು ಪತ್ರಿಕೆಗಳ ಮಹತ್ವ ತುಂಬಾ ಇದ್ದು, ಅದರ ಮಹತ್ವ ಅರೆತು ಪತ್ರಿಕೆ ಮಾಡಲಾಗುತ್ತಿದೆ.. ನಮ್ಮ ಉದ್ಯಮಕ್ಕೆ ಅನುಕೂಲ ಆಗಲೆಂದು ಮಾಡತ್ತಿದ್ದೇವೆ. ಈಗಾಗಲೇ KTVA ನಿಂದ ಕ್ರಿಕೆಟ್, ಪ್ರಮಾಣವಚನ ಸ್ವೀಕಾರ ಸೇರಿದಂತೆ ಹಲವು ಕಾರ್ಯಕ್ರಮ ನಡೆದಿದ್ದು ಯಶಸ್ವಿಯಾಗಿವೆ. ಈ ಎಲ್ಲಾ ಕಾರ್ಯಕ್ರಮಗಳನ್ನು ನಾವು ಪ್ರಾಯೋಜಕರ ಹಾಗೂ KTVA ನ ಸದಸ್ಯತ್ವದ ಹಣದಿಂದ ಮಾಡುತ್ತಿದ್ದೇವೆ. ಇನ್ನೆರಡು ವರ್ಷ ಕಳೆದರೆ ನಮ್ಮ ಕೆಟಿವಿಎಗೆ 25ವರ್ಷದ ಸಂಭ್ರಮ. ಈ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡುವ ಯೋಜನೆಯಿದೆ’ ಎಂದು ಮಾಹಿತಿ ನೀಡಿದರು.
ನಂತರ ಟಿವಿ ಠೀವಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಬುಕ್ಕಾಪಟ್ಟಣ ವಾಸು ಮಾತನಾಡಿ, ‘ಅಂದು ಟಿವಿ ಮಾಧ್ಯಮದ ಸಮಾನ ಮನಸ್ಕರು ಸೇರಿ ‘ಟಿವಿ ಠೀವಿ’ ಪತ್ರಿಕೆ ಪ್ರಾರಂಭಿಸಿದ್ದರು. ಸದ್ಯ ಇದು ಸಿನಿಮಾ ಮ್ಯಾಗಜೀನ್ ತರಾ ಬರಲಿದ್ದು ಉಚಿತವಾಗಿ ನಮ್ಮವರಿಗೆ ಹಂಚಲಾಗುತ್ತದೆ. ಜೊತೆಗೆ ಡಿಜಿಟಲ್ ಮಾಧ್ಯಮದಲ್ಲಿ ಕೂಡ ಇರಲಿದೆ. ಈ ಪತ್ರಿಕೆ ಟಿವಿ ಮಾಧ್ಯಮ ಕುರಿತು ಸಂಪೂರ್ಣ ಮಾಹಿತಿ ನೀಡಲಿದೆ. ಹಳೆ ಬೇರು ಹೊಸ ಚಿಗುರು ಅನ್ನುವಂತೆ ಪತ್ರಿಕೆ ಬರಲಿದೆ. ಇದರಲ್ಲಿ ನಿರ್ಮಾಪಕರು ತಮ್ಮ ಸೀರಿಯಲ್ ಪ್ರಮೋಷನ್ ಕೂಡ ಮಾಡಬಹುದು. ಪತ್ರಿಕಾ ಧರ್ಮದ ಮೂಲಕವೇ ನಾವು ಪತ್ರಿಕೆ ಹೊರ ತರುತ್ತಿದ್ದೇವೆ. ನಾವು ಪತ್ರಿಕೆಯನ್ನು ರೀ-ಲಾಂಚ್ ಮಾಡುತ್ತಿದ್ದೇವೆ’ ಎಂದರು. ಇದೇ ಸಂದರ್ಭದಲ್ಲಿ KTVA ಖಜಾಂಚಿ ಭಾಸ್ಕರ್ ಎಸ್.ಎಸ್. ಉಪಾಧ್ಯಕ್ಷರಾದ ಗಣೇಶ್ ರಾವ್ ಕೇಸರ್‌ಕರ್, ಸದಸ್ಯರಾದ ಶ್ರೀಮತಿ ವಿಣಾ ಸುಂದರ್ ತಮ್ಮ ಅನುಭವ ಹಂಚಿಕೊಂಡರು.