Begur Colony movie review. ಬೇಗೂರು ಕಾಲೋನಿ ಚಿತ್ರ ವಿಮರ್ಶೆ.
ಚಿತ್ರ ವಿಮರ್ಶೆ
Rating – 3/5.
ಚಿತ್ರ: ಬೇಗೂರು ಕಾಲೋನಿ
ನಿರ್ಮಾಣ: M. ಶ್ರೀನಿವಾಸ ಬಾಬು
ನಿರ್ದೇಶನ: ಫ್ಲೇಯಿಂಗ್ ಕಿಂಗ್ ಮಂಜು
ಸಂಗೀತ : ಅಭಿನಂದನ್ ಕಶ್ಯಪ್
ಛಾಯಾಗ್ರಹಣ : ಕಾರ್ತಿಕ್ S.
ತಾರಾಗಣ: ರಾಜೀವ, ಫ್ಲೇಯಿಂಗ್ ಕಿಂಗ್ ಮಂಜು, ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸ್ನಿ ಕೃಷ್ಣಮೂರ್ತಿ, ಭಲ ರಾಜವಾಡಿ,
ಸಿಲಿಕಾನ್ ಸಿಟಿಯ ಬಹು ಮಹಡಿಯ ಕಟ್ಟಡಗಳ ನಡುವೆ ಮಕ್ಕಳಿಗೆ ಆಟ ಆಡಲು ಮೈದಾನ ಬಿಟ್ಟುಕೊಡಿ ಎನ್ನುವು ಮೂಲ ಮಂತ್ರ ಪಠಿಸುವ ಚಿತ್ರ ಬೇಗೂರು ಕಾಲೋನಿ.

ಅದೊಂದು ಕಾಲೋನಿ ಬೆಂಗಳೂರಿನೊಳಗೆ ಬೆರೆತು ಹೋಗಿರುವ ಬೇಗೂರಿನ ಕಾಲೋನಿ.
ಬೆಂಗಳೂರಿನಷ್ಟೇ ಹಳೆಯದಾದ ಊರು ಬೇಗೂರು ಎಂಬುದು ಚಿತ್ರ ತಂಡದ ವಾದ ಮತ್ತು ಅಂಬೋಣ ಇದನ್ನು ನಾವು ಕೂಡ ನಂಬೋಣ.
ಕಾಲೋನಿ ಅಂದ ಮೇಲೆ ಅಲ್ಲಿ ಎಲ್ಲಾ ತರದ ಜನರಿರುತ್ತಾರೆ, ಅಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆ ಅದೆಲ್ಲಕ್ಕೂ ಬೆಳಕು ಚಲ್ಲಲು ಆಗದಿದ್ದರೂ ನಿರ್ದೇಶಕರು ಕೆಲವು ಪಾತ್ರಗಳಿಗೆ ಮಾತ್ರ ಸ್ಪಾಟ್ ಲೈಟ್ ಹಾಕಿದ್ದಾರೆ.
ಇಲ್ಲಿ ಮಕ್ಕಳಿಗೆ ಆಟ ಆಡುವ ಮೈದಾನದ್ದೇ ಪ್ರಮುಖ ವಿಷಯವಾದರೂ, ಅದರೊಳಗೆ ಕಳ್ಳನನ್ಮಕ್ಕಳ ಕಳ್ಳಾಟಗಳೇ ಅನೇಕ.

ಇಲ್ಲಿ ಇಬ್ಬರು ಮಕ್ಕಳಿಗೆ ಮೈದಾನ ಕೊಡಿಸಬೇಕು ಅಂತ ವ್ಯವಸ್ಥೆಯ ಹಿಂದೆ ಬೀಳುತ್ತಾರೆ. ಅವರಲ್ಲಿ ಒಬ್ಬ ಶಾಂತಿ ಶಾಂತಿ ಅಂತ ಶಾಂತಿ ಮಂತ್ರವ ಪಠಿಸಿದರೆ , ಮತ್ತೊಬ್ಬ ಕ್ರಾಂತಿ ಕ್ರಾಂತಿ ಅಂತ ರಕ್ತ ವಾಂತಿ ಮಾಡಿಸುತ್ತಾನೆ.
ರಾಜೀವ ಮತ್ತು ಮಂಜು ಚಿತ್ರದ ಕಥೆಯಲ್ಲಿ ಕುಚುಕು ಗೆಳೆಯರು. ಇಬ್ಬರಿಗೂ ಹಿಂದೆ ಗುರುವಿಲ್ಲದ, ಮುಂದಿರುವುದು ಒಂದೇ ಗುರಿ.
ತಮ್ಮ ಕಾಲೋನಿ ಮಕ್ಕಳಿಗೆ ಆಟ ಆಡಲು ಮೈದಾನ ಕೊಡಿಸಬೇಕು ಎಂದು. ಇದರ ಮದ್ಯೆ ಒಂದಷ್ಟು ರಾಜಕೀಯದ ಷಡ್ಯಂತರಗಳು, ಗುಳ್ಳೇನರಿಗಳ ಕಳ್ಳಾಟಗಳು, ವಯಸ್ಸಾದ ಹಳೇ ಪಂಟರುಗಳು, ಬಾಯಿ ಬಡುಕಿ ಅಮ್ಮ, ತುಂಬು ಗರ್ಬಿಣಿ ಹೆಂಡತಿ, ಕಣ್ಣಾ ಮುಚ್ಚಾಲೆ ಆಡುವ ಹುಡುಗಿ, ಕಿರಿಕಿರಿ ಅನ್ನಿಸೋ ತಲಕಾಯಿ, ಗಠಾರದ ಗಡಾರಿ, ವಯಸ್ಸಾದರೂ ಸುಕ್ಕಾಗದ ಅಪ್ಪ ಇವರ ಮದ್ಯೆ ಕಾರಣವಿಲ್ಲದೇ ಕೊಲೆಯಾಗಿ ಶಾಂತವಾಗಿ ಮಲಗಿದ ಹೆಣ. ಇವೆಲ್ಲವೂ ಕಾಲೋನಿಯ ಕಹಾನಿ.

ನಿರ್ದೇಶಕ ಮಂಜು ಮೊದಲಬಾರಿಗೆ ಪರಿಪೂರ್ಣ ನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರಕ್ಕೆ ನಿರ್ದೇಶನದ ಜೊತೆಗೆ ಅಭಿನಯಕ್ಕೂ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ.
ರಾಜೀವ ಕಾಲೋನಿಯ ಮೈದಾನದಲ್ಲಿ ಸಿಕ್ಸರ್ ಹೊಡೆಯಲು ಅಖಾಡಕ್ಕಿಳಿದು ಬೌಂಡರಿ ಕಡೆಗೆ ಅಪ್ಪಿತಪ್ಪಿಯೂ ಕಣ್ಣಾಡಿಸಿಲ್ಲ ತಮ್ಮ ವಿಕೆಟ್ ಉಳಿಸಿಕೊಳ್ಳಲು ಶತಾಯಾ ಗತಾಯಾ ಒದ್ದಾಡಿ ಕೊನೆಗೆ ಆಟ ಮುಗಿಯುವ ಮುಂಚೆಯೇ ಔಟ್ ಆಗುತ್ತಾರೆ.
ಒಬ್ಬ ನಿರ್ದೇಶಕ ತಾನೇ ನಟನಾದರೆ ಏನೆಲ್ಲಾ ನಡೆಯುತ್ತದೆಯೋ ಅದಕ್ಕೆ ಪೂರಕವಾಗಿ ನಿರ್ದೇಶಕ ಮಂಜು ತಮ್ಮ ಎರೆಡೆರಡು ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ಬರೆದು ಕೊಂಡಿದ್ದಾರೆ ಹಾಗೂ ನಿರ್ದೇಶನ ಮಾಡಿಕೊಂಡಿದ್ದಾರೆ, ಹಾಗೇಯೇ ತೆರೆಯ ಮೇಲೆ ರಾರಾಜಿಸಿದ್ದಾರೆ.
ಚಿತ್ರದ ಪೋಸ್ಟರ್ ಗಳಲ್ಲಿ ನಾಯಕನಾಗಿ ರಾಜೀವ ಮಿಂಚಿದರೆ, ತೆರೆಯ ಮೇಲೆ ಅಬ್ಬರಿಸಿರುವುದು ನಿರ್ದೇಶಕ ಕಮ್ ನಟ ಮಂಜು, ಅಲಿಯಾಸ್ ಫ್ಲೇಯಿಂಗ್ ಕಿಂಗ್ ಮಂಜು.
ಕಾರ್ತಿಕ್ ರವರ ಕ್ಯಾಮೆರಾ ಕಾಲೋನಿಯ ಗಲ್ಲಿ ಗಲ್ಲಿಯಲ್ಲಿ ನಿರಾಯಾಸವಾಗಿ ಚಿತ್ರೀಕರಿಸಿದೆ ಹಾಗೆಯೇ ಅಭಿನಂದನ್ ಕಶ್ಯಪ್ ತಮಟೆ ಸದ್ದು ಮೈ ಮರೆತು ಸ್ಟೆಪ್ ಹಾಕುವ ಹಾಗಿದೆ.
ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸ್ನಿ ಕೃಷ್ಣಮೂರ್ತಿ, ಭಲ ರಾಜವಾಡಿ, ಇವರೆಲ್ಲರೂ ನಿರ್ದೇಶಕರ ಅಣತಿಯ ತಾಳಕ್ಕೆ ತಕ್ಕಂತೆ, ಪಾತ್ರಕ್ಕೆ ತಕ್ಕಂತೆ ಬಣ್ಣ ಹಚ್ಚಿ ಅಭಿನಯಿಸಿದ್ದಾರೆ.
ಒಟ್ಟಿನಲ್ಲಿ ಇದೊಂದು ಕಾಲೋನಿಯ ಬದುಕಿನ, ಬವಣೆಯ, ಆಕ್ಷನ್, ಸೆಂಟಿಮೆಂಟ್, ಪ್ರೀತಿ, ಸೇಡು, ಆಕ್ರೋಷ, ಆವೇಶ, ಹೋರಾಟ,ಕಾದಾಟ, ಎಲ್ಲವೂ ಕಲೆಸಿರುವ ಮಸಾಲೆಪೂರಿ ಎನ್ನಬಹುದು.
ಚಾಟ್ ಪ್ರಿಯರು ಬೇರೆ ಯಾವುದೇ ಥಾಟ್ ಇಲ್ಲದೇ ಚಿತ್ರ ಸವಿಯಬಹುದು.