Baghera movie review ಬಘೀರ ಚಿತ್ರ ವಿಮರ್ಶೆ ಮತ್ತೊಂದು ಯಶಸ್ಸು,ಮುಡಿಗೇರಿಸಿಕೊಂಡ ಹೊಂಬಾಳೆ”
ಚಿತ್ರ: ಬಘೀರ
ನಿರ್ಮಾಣ ಸಂಸ್ಥೆ – ಹೊಂಬಾಳೆ ಫಿಲಂಸ್
ನಿರ್ಮಾಪಕರು – ವಿಜಯ್ ಕಿರಗಂದೂರು
ನಿರ್ದೇಶನ – ಡಾ, ಸೂರಿ
ಕಥೆ – ಪ್ರಶಾಂತ್ ನೀಲ್
ಛಾಯಾಗ್ರಹಣ – ಎ.ಜೆ. ಶೆಟ್ಟಿ
ಸಂಗೀತ – ಅಜನೀಶ್ ಲೋಕನಾಥ್
ಸಂಕಲನ – ರೂಬಿನ್
ಕಲಾವಿದರು – ಶ್ರೀ ಮುರುಳಿ, ಸುಧಾರಾಣಿ, ರುಕ್ಮಿಣಿ ವಸಂತ್, ಪ್ರಕಾಶ್ ರೈ, ರಂಗಾಯಣ ರಘು, ಅಚ್ಯುತ್, ಪ್ರಮೋದ್ ಶೆಟ್ಟಿ, ಗರುಡರಾಮ್, ಮುಂತಾದವರು.
ರೇಟಿಂಗ್ – 4/5
ಜನರನ್ನ ಕಾಪಾಡೋಕೆ ಪೋಲೀಸರೇ ಬೇಕಿಲ್ಲ ಕಾಪಾಡೋ ಮನಸ್ಸಿದ್ದರೆ ಸಾಕು,
ದೇಶ ಕಾಯೋ ಸೈನಿಕ, ಜನರ ಸೇವೆ ಮಾಡೋ ಡಾಕ್ಟರ್,
ಸಮಾಜವನ್ನು ಕಾಪಾಡೋ, ಪೋಲೀಸ್ ಇವರೆಲ್ಲಾ ನಿಜವಾದ ಹೀರೋಗಳು. ಅಷ್ಟೇ ಏಕೆ ನಿಮ್ಮಪ್ಪನೂ ಹೀರೋನೆ ಅನ್ನೋ ತಾಯಿ (ಸುಧಾರಾಣಿ) ಮಾತು ಮುಗ್ದತೆಯಿಂದ, ಅಚ್ಚರಿಯಿಂದ ಕೇಳೋ ಮಗುವಿನ ದೃಶ್ಯ ನಿಜಕ್ಕೂ ಆ ಕ್ಷಣ ಮೈ ಜುಮ್ಮೆನ್ನಿಸುತ್ತದೆ.

ಆ ರೀತಿ ನಿರ್ದೇಶಕರು ಸಿನಿಮಾದ ಒಪನಿಂಗ್ ದೃಶ್ಯಗಳನ್ನ ಕಟ್ಟಿಕೊಟ್ಟಿದ್ದಾರೆ.
ಸಿನಿಮಾ ನೋಡೋ ಪ್ರತಿಯೊಬ್ಬ ಪ್ರೇಕ್ಷಕನಿಗೂ ಕೆಲವು ಕ್ಷಣ ರೋಮಾಂಚನವಾಗುತ್ತದೆ.
ಚಿತ್ರದ ಪ್ರಾರಂಭದಲ್ಲಿ ಸುಧಾರಾಣಿ ಈ ಕಥೆಗೆ ಓಂಕಾರ ಬರೆದಿದ್ದಾರೆ. ತಾಯಿ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ಎನ್ನುವುದನ್ನು ಈ ಪಾತ್ರದ ಮೂಲಕ ಸಾಬೀತು ಮಾಡಿದ್ದಾರೆ.
ಪ್ರೇಕ್ಷಕ ತನಗೆ ಗೊತ್ತಿಲ್ಲದೇ ಸೀಟಿನ ತುದಿಗೆ ಬಂದು ಕೂರುವಂತ ದೃಶ್ಯಗಳನ್ನು ನಿರ್ದೇಶಕ ಡಾ, ಸೂರಿ ಎಣೆದಿರುವುದು ಅದ್ಭುತ ಹಾಗೆ ಕಥೆಯ ಹಿಂದೆ ಕೂತ ಪ್ರಶಾಂತ್ ನೀಲ್ ಒಂದು ಒಳ್ಳೆಯ ಕಥೆಯನ್ನು ಸೃಷ್ಟಿಸಿದ್ದಾರೆ ಎನ್ನಬಹುದು.

ಸಿನಿಮಾ ಪ್ರಾರಂಭದಿಂದ ಮಧ್ಯಂತರದ ವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರುವುದು ಅದು ಬಘೀರನ ತಾಕತ್ತು ಎಂದರೆ ಅತಿಶಿಯೋಕ್ತಿಯಲ್ಲ.
ಶ್ರೀ ಮುರುಳಿಯ ಮೂರು ವರ್ಷಗಳ ಶ್ರಮ ಎಕ್ಸಲೆಂಟಾಗಿ ತೆರೆಯ ಮೇಲೆ ಕಾಣಿಸುತ್ತದೆ.
ಪೋಲೀಸ್ ಅಧಿಕಾರಿ ವೇದಾಂತ್ ಆಗಿ ಶ್ರೀಮುರುಳಿ ಅಕ್ಷರ ಸಹ ಅಬ್ಬರಿಸಿದ್ದಾರೆ.
ನರ ರಾಕ್ಷಸರನ್ನು ಸಧೆ ಬಡಿಯುವ ಸಾಹಸ ಸನ್ನಿವೇಶವಂತು ತುಂಬಾ ಅರ್ಥಪೂರ್ಣವಾಗಿ ಚಿತ್ರೀಕರಿಸಲಾಗಿದೆ.
ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ಅಮಾನುಷ ದೌರ್ಜನ್ಯ ನಡೆಸುವ ದುಷ್ಟ ಸಂತತಿಗೆ ಹೇಗೆ ಪಾಠ ಕಲಿಸಬೇಕು ಎನ್ನುವ ದೃಶ್ಯಗಳಿಗೆ ಶ್ರೀ ಮುರುಳಿ ಲೀಲಾ ಜಾಲವಾಗಿ ಪರಕಾಯ ಪ್ರವೇಶ ಮಾಡಿದ್ದಾರೆ ಎನ್ನಬಹುದು.

ಮಫ್ತಿ ಚಿತ್ರದ ನಂತರ ಪೋಲೀಸ್ ಅಧಿಕಾರಿಯಾಗಿ ಅಭಿನಯಿಸುವುದರ ಜೊತೆಗೆ ಮೈ ಮೇಲೆ ಖಾಕಿ ಹಾಕಿದ್ದಾರೆ. ಮಸ್ತಾದ ಮೈಕಟ್ಟು, ಖಾಕಿ ಖದರಿಗೆ ಹೇಳಿ ಮಾಡಿಸಿದಂತ ಚಿರತೆಯಂತಹ ನೋಟ ಎಲ್ಲವನ್ನು ಮುರುಳಿ ಸರಿಯಾಗಿ ನಿಭಾಯಿಸಿ ಪ್ರೇಕ್ಷಕರ ಮನದಲ್ಲಿ ನಿಲ್ಲುತ್ತಾರೆ.
ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಕಥೆಯೊಂದಿಗೆ ಪೈಪೋಟಿ ನೀಡಿದೆ.
ಅಜನೀಶ್ ಮೊದಲರ್ಧ ಭಾಗದ ಕಥೆಗೆ ಸಂಗೀತದ ಮೂಲಕ ಜೀವ ತುಂಬಿದ್ದಾರೆ. ಎರಡನೇ ಭಾಗದ ಕಥೆಗೂ ಅದೇ ವೇಗ, ಅದೇ ರಿದಮ್ ಇದ್ದಿದ್ದರೆ ಇನ್ನೂ ಸಖತ್ತಾಗಿ ಮೂಡಿ ಬರುವುದರಲ್ಲಿ ಎರಡು ಮಾತಿಲ್ಲ.
ಮೊದಲ ಭಾಗದ ನಂತರ ಬಘಿರನಿಂದ ಇನ್ನೇನೋ ಬೇಕೆನಿಸುತ್ತದೆ, ACP ವೇದಾಂತ್ ಮುಂದೆ ಬಘೀರ ಯಾಕೋ ಸ್ವಲ್ಲ ಮಂಕಾದ ಅನ್ನಿಸುತ್ತದೆ.
ಕಥೆ, ಕಥೆಯ ವೇಗಕ್ಕೆ ಸ್ವಲ್ಪ ಬ್ರೇಕ್ ಹಾಕಿದಂತೆ ಕಾಣುತ್ತದೆಯಾದರೂ, ಉಳಿದ ಪಾತ್ರಗಳು, ಸನ್ನಿವೇಶಗಳು, ಕ್ಯಾಮರಾ ಕೈಚಳಕ , ಹಾಡುಗಳು ಎಲ್ಲವೂ ಚಿತ್ರಕ್ಕೆ ಪುಷ್ಠಿ ನೀಡಿವೆ.

ಚೇತನ್ ಡಿಸೋಜ ಆಕ್ಷನ್ ದೃಶ್ಯಗಳನ್ನು ಚಚ್ಚಿ ಹಾಕಿದ್ದಾರೆ.
ಹೆಣ್ಣೊಬ್ಬಳ ಆತ್ಯಾಚಾರದ ವಿರುದ್ಧ ನಾಯಕನ ಫೈಟ್ ಅಂತು ಪ್ರೇಕ್ಷಕನ ಆಕ್ರೋಶದ ಧ್ವನಿಯಂತೆ ಕಾಣುತ್ತದೆ.
ಆಕ್ಷನ್, ಮ್ಯೂಸಿಕ್, ಎರಡು ಚಿತ್ರದ ಯಶಸ್ಸಿನ ರಿಧಂಗಳು. ಇನ್ನು ಕ್ಯಾಮರಾ ಕೆಲಸ ತುಂಬಾ ಸುಂದರ ಮತ್ತು ನಯನ ಮನೋಹರವಾಗಿ ಎ.ಜೆ. ಶೆಟ್ಟಿ ಚಿತ್ರೀಕರಿಸಿದ್ದಾರೆ. ಆಜ್ಷನ್ ದೃಶ್ಯಗಳನ್ನು ಕಣ್ಣಿಗೆ ಕಟ್ಟಿದಂತೆ ವೈಭವೀಕರಿಸಲಾಗಿದೆ. ಒಂದು ಸಿನಿಮಾ ಗೆಲ್ಲೋಕೆ ಕ್ಯಾಮರಾ, ಹಾಗೂ ಮ್ಯೂಸಿಕ್ ಅತೀ ಮುಖ್ಯವಾಗುತ್ತದೆ. ಅದು ಇಲ್ಲಿ ಎದ್ದು ಕಾಣುತ್ತದೆ.
ದೇವ್ರಂತ ಮನುಷ್ಯ ಆದರೂ ಗುಡಿಯಲ್ಲಿ ಪೂಜಾರಿನೇ ಪೂಜೆ ಮಾಡಬೇಕು ಎನ್ನುವುದು ನಿಜ ಹಾಗೆಯೇ ದೇವರೇ ಎದ್ದು ಬಂದ್ರೆ ಏನು ಬೇಕಾದ್ರೂ ಆಗುತ್ತೆ. ಎನ್ನುವ ಪ್ರಕಾಶ್ ರೈ ಸಂಭಾಷಣೆ ನಿಜ ಅನ್ನಿಸುತ್ತದೆ.
ಪ್ರಕಾಶ್ ರೈ ಚಿತ್ರದಲ್ಲಿ ಸಿಬಿಐ ಅಧಿಕಾರಿಯಾಗಿ ಕಥೆಗೆ ವಿಭಿನ್ನವಾದ ಟ್ವಿಸ್ಟ್ ನೀಡಿ ಕ್ಲೈಮ್ಯಾಕ್ಸ್ ನಲ್ಲಿ ಪ್ರೇಕ್ಷಕನ ನೆನಪಿನಲ್ಲಿ ಉಳಿಯುತ್ತಾರೆ.

ಸದ್ಯದ ಕರ್ನಾಟಕದ ಕ್ರಶ್ ಸಪ್ತ ಸಾಗರದಾಚೆಯಲ್ಲಿ ಜನರ ಪ್ರೀತಿಯನ್ನು ಗಳಿಸಿದ್ದ ರುಕ್ಮಿಣಿ ವಸಂತ್ ಬಘೀರದಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ.
ಇಲ್ಲಿ ಡಾಕ್ಟರ್ ಆಗಿ, ಒಬ್ಬ ಪ್ರಬುದ್ಧ ಪ್ರೇಮಿಯಾಗಿ, ತ್ಯಾಗಿಯಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಹಾಗೆ ಚಿತ್ರದ ಕೊನೆಯಲ್ಲಿ ನಿರ್ದೇಶಕರು ನಾಯಕಿ ಪಾತ್ರಕ್ಕೆ ಸರಿಯಾದ ನ್ಯಾಯ ಒದಗಿಸಲಿಲ್ಲ ಅನ್ನಿಸುವುದಂತು ನಿಜ.
ಖಳನಟನ ಕೈಗೆ ಸಿಲುಕಿ ಅಷ್ಟೋಂದು ಕ್ರೂರ ಸನ್ನಿವೇಶ ಬೇಕಿರಲಿಲ್ಲ ಅದೇಕೋ ಇಲ್ಲಿ ಸ್ವಲ್ಪ ಎಡವಿದಂತೆ ಕಾಣುತ್ತದೆ.
ಕೆ.ಜಿ.ಎಫ್. ಖ್ಯಾತಿಯಾ ಗರುಡರಾಮ್ ಖಳನಟನಾಗಿ ಕ್ರೂರವಾಗಿ ಗರ್ಜಿಸಿದ್ದಾರೆ. ಸಿನಿಮಾದ ಪ್ರಾರಂಭದಲ್ಲಿ ನಾಯಕನಿಗಿಂತ ಖಳನಾಯಕನಿಗೆ ಹೆಚ್ಚು ಬಿಲ್ಡಪ್ ಕೊಟ್ಟಿದ್ದಾರೆ. ಆ ಪಾತ್ರದ ತೂಕವೇ ಹಾಗಿದೆ ಖಳನಟನ ಪಾತ್ರದ ಎಲ್ಲೆ ಎಲ್ಲವನ್ನು ಮೀರಿದ್ದು, ವಿಕಾರವಾದ ಮುಖ, ಆ ಮುಖದ ಹಿಂದಿನ ಕರಾಳತೆ, ಅದರ ಹಿಂದಿನ ರಕ್ಕಸತನ ನಿಜಕ್ಕೂ ಇಂತಹ ರಕ್ಕಸರಿದ್ದಾರಾ ಎಂಬ ಪ್ರಶ್ನೆಯೇ ಭಯಾನಕವಾದದ್ದೂ. ಗರುಡರಾಮ್ ಪಾತ್ರ ನಾಯಕನಷ್ಟೇ ಪ್ರಮುಖವಾದದ್ದು, ಪಾತ್ರದೊಳಗೆ ಇಳಿದ ಗರುಡರಾಮ್ ಜೀವ ತುಂಬಿ ಅಭಿನಯಿಸಿ, ಜೀವ ಕಾಡುತ್ತಾರೆ.
ಅಶ್ವಿನ್ ಹಾಸನ್ ಒಬ್ಬ ನಿಷ್ಠೂರ, ಪ್ರಾಮಾಣಿಕ ಪತ್ರಕರ್ತನಾಗಿ ಅಭಿನಯಿಸಿದ್ದಾರೆ.
ರಂಗಾಯಣ ರಘು ಪೋಲೀಸ್ ಪೇದೆಯಾಗಿ ಇಡೀ ಕಥೆಯಲ್ಲಿ ಒಂದಕ್ಕೊಂದು ಕೊಂಡಿಯಾಗಿ ಕೆಲವು ಅರ್ಥ ,ಅನರ್ಥ ಕಾರ್ಯಗಳಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಕಾರಣಕರ್ತರಾಗಿ ಅಭಿನಯಿಸಿದ್ದಾರೆ.
ಪ್ರಮೋದ್ ಶೆಟ್ಟಿ ವೈಟ್ ಕಾಲರ್ ಕ್ರಿಮಿನಲ್ ಆಗಿ ದುಷ್ಟ ಸಂತತಿಗಳಲ್ಲಿ ಪ್ರಮುಖರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.

ಕಥಾ ಸಾರಂಶ –
ಚಿಕ್ಕಂದಿನಿಂದಲೇ ಸೂಪರ್ ಹೀರೋ ಆಗುವ ಕನಸ್ಸಿಗೆ ತಾಯಿಯಿಂದ ಪ್ರೇರೇಪಣೆ ಪಡೆಯುವ ಹುಡುಗ, ಮುಂದೆ ತಂದೆಯಂತೆ ಪೋಲೀಸ್ ಇಲಾಖೆ ಸೇರುತ್ತಾನೆ.
ಆತನೆ ದಕ್ಷ ಯುವ ಪೋಲೀಸ್ ಅಧಿಕಾರಿ ACP ವೇದಾಂತ್.
ಸಮುದ್ರದ ಕಿನಾರೆಯಲ್ಲಿ ನಡೆಯುವ ದಂದೆಗಳು, ಮಾನವ ಸಾಗಾಣಿಕೆ, ಅಮಾಯಕರ ಅಂಗಾಂಗಗಳ ಕಳ್ಳತನ, ಅಬಲೆಯರ ಮೇಲೆ ಅಮಾನುಷ ಅತ್ಯಾಚಾರ, ರಾಕ್ಷಸರ ಅಟ್ಟಹಾಸ,
ಸಮಾಜ ಘಾತುಕ ಶಕ್ತಿಗಳ ವಿರುದ್ಧ ಸಿಡಿದೆದ್ದು ಬಗ್ಗು ಬಡಿಯುವ ACP ವೇದಾಂತ್ ಗೆ ಕಾನೂನಿನ ಸಿಸ್ಟಂ ಆತನನ್ನು ಪ್ರಾಮಾಣಿಕವಾಗಿ ಕೆಲಸ ಮಾಡಲು ಬಿಡುವುದಿಲ್ಲ.
ಆಗ ಬರುವುದೇ ಈ ಸೂಪರ್ ಹೀರೋ ಬಘೀರ.
ಈ ಸೂಪರ್ ಹೀರೋ ಬಘೀರ ಸಮಾಜದ ಹೊಲಸನ್ನು, ದುಷ್ಟ ಸಂತತಿಯನ್ನು ಹೇಗೆ ನಿರ್ನಾಮ ಮಾಡುತ್ತಾನೆ ಅದರಿಂದ ಆಗುವ ಎಡರು ತೊಡರುಗಳೇನು ತಿಳಿಯಲು ಸಿನಿಮಾ ನೋಡಬೇಕು.

ಹೊಂಬಾಳೆ ಸಂಸ್ಥೆಯ ಸಿನಿಮಾ ಎಂದರೆ ಅದ್ದೂರಿ ತನಕ್ಕೇನು ಕಡಿಮೆ ಇರುವುದಿಲ್ಲ ಹಾಗೆಯೇ ಸಿನಿಮಾ ಗುಣಮಟ್ಟವು ಪ್ರಬುದ್ಧ ವಾಗಿರುತ್ತದೆ. ಸಿನಿಮಾ ನಿರ್ಮಾಣದಲ್ಲಿ ಜಗತ್ತಿನ ಗಮನ ಸೆಳೆದ ಕನ್ನಡದ ಹೆಮ್ಮೆಯ ಸಂಸ್ಥೆ ಹೊಂಬಾಳೆ ಫಿಲಂಸ್ ಎನ್ನಬಹುದು.
ರಾಜಕುಮಾರದಂತ ಸುಸಂಸ್ಕೃತ ಚಿತ್ರವನ್ನು, ಯುವರತ್ನದಂತ ಪ್ರಬುದ್ಧ ಚಿತ್ರವನ್ನು, ಕಾಂತಾರದಂತ ದೈವರೂಪದ ಚಿತ್ರವನ್ನು, ಕೆ.ಜಿ.ಎಫ್. ನಂತಹ ಫ್ಯಾಂಟಸಿ ಚಿತ್ರವನ್ನು ನೀಡಿದ ಹೊಂಬಾಳೆ ಈಗ ಸಮಾಜಮುಖಿಯಾಗಿ ಬಘೀರನನ್ನು ನೀಡಿದೆ.
ನಿರ್ಮಾಪಕರಾದ ವಿಜಯ್ ಕಿರಗಂದೂರು ಒಳ್ಳೆಯ ಸಿನಿಮಾ ನೀಡುವ ಮೂಲಕ ಕನ್ನಡದ ಸಿನಿಮಾಗಳನ್ನು ವಿಶ್ವ ಮಟ್ಟಕ್ಕೆ ತಲುಪಿಸುವಲ್ಲಿ ಬಹು ದೊಡ್ಡ ಜವಾಬ್ದಾರಿ ಸ್ಥಾನದಲ್ಲಿದ್ದಾರೆ.
ಒಬ್ಬ ಸಿನಿಮಾ ಫ್ಯಾಷನ್ ಇರುವಂತ ಸದಭಿರುಚಿಯ ನಿರ್ಮಾಪಕ ಎನ್ನಬಹುದು.

ಒಟ್ಟಿನಲ್ಲಿ ವರ್ಷದ ಕೊನೆಯಲ್ಲಿ ಬಘೀರ ಕನ್ನಡ ಚಿತ್ರರಂಗಕ್ಕೆ ಪುಷ್ಠಿ ನೀಡುವಂತಿದೆ.