1990’s movie review. 1990s ಚಿತ್ರ ವಿಮರ್ಶೆ ಮುಗ್ದ ಮನಸ್ಸುಗಳ ಸುಂದರ, ಸುಮಧುರ ಸಂಗೀತದ ಪ್ರೇಮಕಥೆಯ ದೃಶ್ಯಕಾವ್ಯ. Rating – 3.5/5

ಚಿತ್ರ:1990s
ನಿರ್ಮಾಣ:  ಮನಸ್ಸು ಮಲ್ಲಿಗೆ ಕಂಬೈನ್ಸ್
ನಿರ್ದೇಶನ: C.M. ನಂದಕುಮಾರ್
ಸಂಗೀತ : ಮಹಾರಾಜ್
ಛಾಯಾಗ್ರಹಣ :  ಹಾಲೇಶ್
ಸಂಕಲನ : ಕೃಷ್ಣ

ತಾರಾಗಣ : ಅರುಣ್ , ರಾಣಿ ವರದ್,   ನಾಯಕಿಯ ತಂದೆಯಾಗಿ   ಅರುಣ್ ಕುಮಾರ್,   ಖಳನಟ ದೇವು, ಸ್ವಪ್ನ ಶೆಟ್ಟಿಗರ್, ಸುಪ್ರೀತ್ R. , ಶಿವಾನಂದ ಬಿ. ತುರುವನೂರು, ಗಡ್ಡಪ್ಪ ಮುತ್ತು ರಾಜ್ ಮಂತಾದವರು..

“1990 s” ಸಂಗೀತ ದೃಶ್ಯಕಾವ್ಯದ
ಪ್ರೇಮಕಥೆ*

*ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ – ರಾಣಿ ವರದ್ ಅಭಿನಯದ “1990s” ಚಿತ್ರ ಇಂದು ತೆರೆ ಕಂಡಿದೆ.

  ಇದು 1990ರ ಕಾಲಘಟ್ಟ ದಲ್ಲಿ ನಡೆಯುವ ಮುಗ್ಧ ಮನಸ್ಸುಗಳ ಪ್ರೇಮಕಥೆ.
ಪ್ರೀತಿ ಅನ್ನೋದು ಶತ ಶತಮಾನಗಳಿಂದ ಎರಡು ಮನಸ್ಸುಗಳ ನಡುವಿನ ಭಾವನಾತ್ಮಕ  ರಾಯಭಾರಿ.

ಪ್ರೇಮಿಗಳು ಬದಲಾಗ ಬಹುದು, ಪ್ರೇಮಿಸುವ ಕಾಲಘಟ್ಟಗಳು ಬದಲಾಗಬಹುದು. ಆದರೆ ಪ್ರೇಮ ಅನಂತ ಹಾಗೂ ಅಮರ. ಅನ್ನೋದಕ್ಕೆ ಹಲವಾರು ಕಥೆಗಳು ನಮ್ಮ ನಡುವೆಯೇ ಹುಟ್ಟಿ ಚಿಗುರಿ, ಅರಳಿ ಸುಂದರವಾದ ಬದುಕನ್ನು ಕಟ್ಟಿಕೊಂಡಿರುವುದನ್ನು ನೋಡಿದ್ದೇವೆ, ಹಾಗೆಯೇ ಅರಳಿ ಘಮ ಸೂಸ ಬೇಕಿದ್ದ ಮನಸುಗಳು ಕಮರಿ ಹೋಗುವುದನ್ನು ಕಂಡಿದ್ದೇವೆ.
ಆದರೆ ಇದು ಮಲ್ಲಿಗೆಯಂತಹ ಮನಸ್ಸಿನವರು ಸೇರಿ ನಿರ್ಮಿಸಿರುವ ಸಿನಿಮಾ. ಅದಕ್ಕಾಗಿಯೇ ಈ ಚಿತ್ರ ನಿರ್ಮಾಣದ ಸಂಸ್ಥೆಯ ಹೆಸರು ಮನಸ್ಸು ಮಲ್ಲಿಗೆ ಕಂಬೈನ್ಸ್.

ಇಲ್ಲಿ ಇಬ್ಬರು ಚಿಕ್ಕ  ವಯಸ್ಸಿನಿಂದಲೇ ಕಿತ್ತಾಡಿಕೊಂಡು, ಕಚ್ಚಾಡಿಕೊಂಡು ಬೆಳೆದ ಮಕ್ಕಳು, ಅವನು ಸಾಧಾರಣ ಮಧ್ಯಮ ವರ್ಗ ಕುಟುಂಬದ ಹುಡುಗ,  ಒಂದು ರೀತಿಯಲ್ಲಿ ಹುಡುಗರನ್ನು ಕಟ್ಟಿಕೊಂಡು ಅಲೆಯುವ ಹುಂಬ, ಒರಟ.

ಇನ್ನು ಅವಳು ಸಂಪ್ರದಾಯಸ್ಥ ಮನೆತನದ, ತುಂಬಾ ಮೃದು ಸ್ವಭಾವದ, ಸದಾ ಭಯದಿಂದ ಬದುಕುವ, ಶ್ರೀಮಂತ ಕುಟುಂಬದ ಬಡ ಜೀವ.


ಚಿಕ್ಕಂದಿನಿಂದ ಅವಳನ್ನು, ಅವಮಾನಿಸುತ್ತಾ, ಛೇಡಿಸುತ್ತಾ, ತಂಟೆಮಾಡುತ್ತಾ, ಅಳಿಸುತ್ತಾ, ಗೋಳು ಹೊಯ್ದುಕೊಳ್ಳುವ ಅವನಿಗೆ ಅದೊಂದು ಘಳಿಗೆ, ಅವಳು ಮೈನೆರೆದ ಆರತಿ ಕಾರ್ಯದಲ್ಲಿ ಅವಳ ಸೌಂದರ್ಯಕ್ಕೆ ಸೋತು ಸೊರಗುತ್ತಾನೆ, ಅವಳನ್ನು ಗೋಳು ಹೊಯ್ದು ಕೊಳ್ಳುತ್ತಿದ್ದವನು, ಅವಳಿಗಾಗಿ ಗೋಳಾಡುತ್ತಾನೆ, ಸದಾ ಅವಳನ್ನು ಹೆದರಿಸುತ್ತಿದ್ದವನು, ಅವಳ ಮುಂದೆ ನಿಲ್ಲುವುದಿರಲಿ, ಅವಳ ದ್ವನಿ ಕೇಳಿದರೆ ಹೆದರುತ್ತಾನೆ. ಎಗರಾಡುತ್ತಿದ್ದ ವ್ಯಾಘ್ರಮನಸ್ಸು,  ಮುದುರಿ ಕುಳಿತ ಗುಬ್ಬಿಯಂತಾಗುತ್ತದೆ.

ಇನ್ನು ಅವನ ತಲೆ ಕಂಡರೆ ಹೆದರಿ ನೆಲಕ್ಕೆ ಕಣ್ಣು ನೆಡುತಿದ್ದ ಹುಡುಗಿ ಅವನನ್ನು ಪ್ರೀತಿಸುತ್ತಾಳಾ..? ಜಂಬ, ಹುಂಭತನವನ್ನು ಮೂಟೆ ಕಟ್ಟಿ ಚರಂಡಿಗೆ ಬಿಸಾಡಿ, ತಲೆ ತಗ್ಗಿಸಿ ಅವಳ ಪ್ರೀತಿಗಾಗಿ ಅಂಬಲಿಸುವ ಅವನು, ಅವಳ ಪ್ರೀತಿಯನ್ನು ಪಡೆಯುತ್ತಾನಾ..? ಸಮಾಜ ಇವರ ಪ್ರೀತಿಯನ್ನು ಒಪ್ಪುತ್ತಾ ಎನ್ನುವುದೇ ಚಿತ್ರ.

ನಿರ್ದೇಶಕ ನಂದಕುಮಾರ್ ಚಿತ್ರದ ಕಥೆಯನ್ನು ಭಾವನೆಗಳೊಂದಿಗೆ ಮೆರೆಸಿದ್ದಾರೆ.
ಅಪ್ಪ ಮಗಳ ಸಂಭಂದ, ಅಪ್ಪ ಮಗನ ಸಂಭಂದ ವನ್ನು ಹೃದಯಗಳೊಂದಿಗೆ ಬೆಸೆದಿದ್ದಾರೆ.
ಈ ಕಥೆಯೊಂದಿಗೆ ನಿರ್ದೇಶಕ ಜೀವಿಸಿ ಹೊಸೆದಿದ್ದಾರೆ ಎನ್ನಬಹುದು.


ನಿರ್ದೇಶಕನ ಕನಸ್ಸಿಗೆ ಜೀವ ಕೊಡುವುದು ಛಾಯಾಗ್ರಾಹಕ ಇಲ್ಲಿ ನಿರ್ದೇಶಕನ ಕಥೆಯ ಪ್ರತಿಯೊಂದು ಸಾಲಿಗೂ ಜೀವ ತುಂಬಿರುವುದು ಛಾಯಾಗ್ರಾಹಕ ಹಾಲೇಶ್.
ನಿರ್ದೇಶಕ ನಂದಕುಮಾರ್ ಚಿತ್ರಕ್ಕೆ ಮುಖ್ಯ ಆಧಾರ ಸ್ಥಂಭವಾದರೆ, ಹಾಲೇಶ್ ಈ ಚಿತ್ರದ ಮತ್ತೊಂದು ಆಧಾರ ಸ್ಥಂಭ ಎನ್ನಬಹುದು. ಅಷ್ಟು ಸುಂದರವಾದ ದೃಶ್ಯಕಾವ್ಯವನ್ನು ಹಾಲೇಶ್ ಕಟ್ಟಿಕೊಟ್ಟಿದ್ದಾರೆ.
ಒಂದು ಕಥೆಗೆ , ಕಥೆಯ ಓಟಕ್ಕೆ ಸಾಕ್ಷಿಯಾಗಿ ಅದರೊಂದಿಗೆ ಮನಸ್ಸಿಗೆ ಮುದ ನೀಡುತ್ತಾ, ಚಿತ್ರದ ಏರಿಳಿತಗಳಿಗೆ ತಾಳಬದ್ದವಾದ ಭಾವನೆಗಳಿಗೆ ಜೀವ ತುಂಬುವುದು ಸಂಗೀತ. 1990s ಚಿತ್ರದ ಇನ್ನೊಂದು ಪಿಲ್ಲರ್ ಸಂಗೀತ ನಿರ್ದೇಶಕ ಮಹಾರಾಜ್. ನಿಜಕ್ಕೂ ಸಂಗೀತದಲ್ಲಿ ಮಹಾರಾಜನ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಸಂಗೀತ ಸಂಯೋಜಕ ಮಹಾರಾಜ್ ರವರು ಈ ಚಿತ್ರಕ್ಕೆ ಪ್ರಶಸ್ತಿಗಳನ್ನು ಬಾಚಿಕೊಂಡರೆ ಆಶ್ಚರ್ಯ ಪಡುವ ಹಾಗಿಲ್ಲ.
ಈ ಎಲ್ಲಾ ತಂತ್ರಜ್ಞರ ಜೊತೆಗೆ ನಿಂತಿರುವುದು ನಿರ್ಮಾಣ ಸಂಸ್ಥೆ “ಮನಸ್ಸು ಮಲ್ಲಿಗೆ ಕಂಬೈನ್ಸ್,” ಹೆಸರೇ ಹೇಳುವಂತೆ ಮಲ್ಲಿಗೆಯಂತಹ ಒಂದಷ್ಟು ಒಳ್ಳೆಯ ಮನಸ್ಸುಗಳು ಸೇರಿ ಈ ಚಿತ್ರವನ್ನು ನಿರ್ಮಿಸಿರುವುದು ಶ್ಲಾಘನೀಯ.


ಹಾಗೆಯೇ ಈ ಕಥೆಯ ಅಷ್ಟು ತುಣುಕುಗಳನ್ನು ಕೂಡಿ, ಕಳೆದು, ಹೊಲೆದು ಪ್ರೇಕ್ಷಕರಿಗೆ ಉಣ ಬಡಿಸಿರುವುದು ಸಂಕಲನಕಾರ ಕೃಷ್ಣ. ಇಲ್ಲಿ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಈ ಚಿತ್ರದ ಸೊಬಗು ಮತ್ತಷ್ಟು ಹೆಚ್ಚುವುದರಲ್ಲಿ ಸಂಶಯವಿಲ್ಲ.

ಇನ್ನು ಪಾತ್ರಗಳ ಬಗ್ಗೆ ಹೇಳುವುದಾದರೆ ಮೊದಲ ಬಾರಿಗೆ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟ ಅರುಣ್ ಕುಮಾರ್. ನಟನೆಗಾಗಿ ರಂಗಭೂಮಿ, ನಟನಾ ಶಾಲೆಗಳಲ್ಲಿ ಕಲಿತು ಬಂದಿರುವ ಈತ ಪೂರ್ಣ ಮಟ್ಟದಲ್ಲಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಒಬ್ಬ ಅಮಾಯಕನಾಗಿ, ಒರಟ ಹುಂಬನಾಗಿ ಎರಡು ಶೈಲಿಯ ಪಾತ್ರವನ್ನು ನಿಭಾಯಿಸಿ ಸೈ ಅನಿಸಿಕೊಂಡಿದ್ದಾರೆ.
ಹಾಗೆಯೇ ನಾಯಕಿಯಾಗಿ ಪರದೆಯ ಮೇಲೆ ಮಿಂಚಿ ಪ್ರೇಕ್ಷಕರ ಮನಸ್ಸಿಗೆ ಹತ್ತಿರ ವಾಗುವಂತೆ ಪಾತ್ರಕ್ಕೆ ತನ್ನನ್ನು ತಾನು ತೊಡಗಿಸಿಕೊಂಡಿರುವ ನಟಿ ರಾಣಿ ವರದ್ ಮುಗ್ದತೆಯೇ ಮೈದಳೆದಂತೆ ಭಾವನಾತ್ಮಕವಾಗಿ ಇಷ್ಟವಾಗುತ್ತಾರೆ.


ಇನ್ನು ನಿರ್ಮಾಪಕರಲ್ಲಿ ಒಬ್ಬರಾದ ಅರುಣ್ ಕುಮಾರ್ ಬೇರೆ ವೃತ್ತಿಯವರಾದರು ಪ್ರವೃತ್ತಿಯಾಗಿ ಮೊದಕ ಬಾರೊಗೆ ಮುಖಕ್ಕೆ ಬಣ್ಣ ಹಚ್ಚಿದ್ದರು ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕಿಯ ಅಸಹಾಯಕ ತಂದೆಯಾಗಿ, ಊರಿನ ಒಬ್ಬ ಗಣ್ಯವ್ಯಕ್ತಿಯಾಗಿ ಬಹಳ ಅಚ್ಚುಕಟ್ಟಾಗಿ ಪಾತ್ರವನ್ನು ನಿಭಾಯಿಸಿದ್ದಾರೆ.

ಒಟ್ಟಿನಲ್ಲಿ 2025ರ ಮೊದಲ ಭಾವನಾತ್ಮಕ ಪ್ರೇಮಕಥೆ 1990s ಚಿತ್ರ ಎನ್ನಬಹುದು.
ಚಿತ್ರ ಐದು ಭಾಷೆಗಳಲ್ಲಿ ನಿರ್ಮಾಣವಾಗಿದ್ದು. ಮುಂದಿನ ದಿನಗಳಲ್ಲಿ ಉಳಿದ ಭಾಷೆಗಳಲ್ಲಿ ತೆರೆ ಕಾಣಲಿದೆ.
ಇಂದಿನ ಕಾಲಘಟ್ಟದ ಯುವಕ, ಯುವತಿಯರು 90ರ ದಶಕದ  ಪ್ರಾಮಾಣಿಕ ಪ್ರೀತಿ, ಅದರೊಳಗಿನ ಶುದ್ಧತೆಯ ಭಾವನೆಗಳು, ಶುದ್ಧ ಮನಸ್ಸುಗಳ ಸಮ್ಮಿಲವನ್ನು ಕಣ್ತುಂಬಿ ಕೊಳ್ಳಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor