ಸುಪಾರಿ ಕಿಲ್ಲರೊಬ್ಬನ ಅಂತರಾಳದ ಕಥೆಗೆ ಯತಿರಾಜನ ಸಾರಥ್ಯ
ಯತಿರಾಜ್ ನಿರ್ದೇಶನದಲ್ಲಿ ಬರುತ್ತಿದೆ “ಸತ್ಯಂ ಶಿವಂ”.
“ಇದು ಸುಪಾರಿ ಕಿಲ್ಲರ್ ಕಥೆ”
"ಪೂರ್ಣಸತ್ಯ" ಚಿತ್ರದಿಂದ ನಿರ್ದೇಶಕನಾಗಿ, ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿರುವ "ಸಂಜು" ಚಿತ್ರದವರೆಗೆ 5 ಸಿನಿಮಾಗಳನ್ನು ನಿರ್ದೇಶಿಸಿರುವ ಯತಿರಾಜ್, ಈಗ ತಮ್ಮ ನಿರ್ದೇಶನದ ನೂತನ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಸುಪಾರಿ ಕಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಹೆಸರು "ಸತ್ಯಂ ಶಿವಂ".
ಈ ಹಿಂದೆ ಭಿಕ್ಷುಕ ಎಂಬ ಚಿತ್ರವನ್ನು ನಿರ್ಮಿಸಿದ್ದ ಬುಲೆಟ್ ರಾಜು ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರಂದಿಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ.
ಚಿತ್ರದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಯತಿರಾಜ್, ಕೊರೋನ ಸುಮಾರು ಜನರ ಜೀವನ ಬದಲಿಸಿದೆ. ನಾನು ಆಗ ಶಾರ್ಟ್ ಫಿಲಂ ನಿರ್ದೇಶನ ಆರಂಭಿಸಿ, ೧೫ಕ್ಕೂ ಹೆಚ್ಚು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೆ. ಇನ್ನು ಈ ಚಿತ್ರದ ಬಗ್ಗೆ ಹೇಳಬೇಕೆಂದರೆ, “ಸತ್ಯಂ ಶಿವಂ” ಎರಡು ಪಾತ್ರಗಳ ಹೆಸರಲ್ಲ, ನಾಯಕನಿಗೆ ಸತ್ಯದ ದರ್ಶನ ಮಾಡಿಸುವ ಪಕ್ಕಾ ಮಾಸ್ ಸಿನಿಮಾ. ರಾ, ರೌಡಿಸಂ, ಬ್ಲಡ್ ಎಲ್ಲವೂ ಇದರಲ್ಲಿದೆ. ಇದು ಒಬ್ಬ ಸುಪಾರಿ ಕಿಲ್ಲರ್ ಕಥೆ. ಆತ ದುಡ್ಡಿಗೋಸ್ಕರ ಏನು ಬೇಕಾದರೂ ಮಾಡುವ, ಯಾವಮಟ್ಟಕ್ಕೆ ಬೇಕಾದರೂ ಹೋಗುವವನು. ಚಿತ್ರದಲ್ಲಿ ಸಂಗೀತಾ, ವೀಣಾ ಸುಂದರ್, ಅಲ್ಲದೆ ನಾನು ವಿಜಯ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಪತ್ನಿಯ ಪಾತ್ರದಲ್ಲಿ ತೇಜಸ್ವಿನಿ ನಟಿಸಲಿದ್ದಾರೆ. ಸಂಜನಾ ನಾಯ್ಡು ಚಿತ್ರದ ನಾಯಕಿ. ಮೈಸೂರು, ಶ್ರೀರಂಗಪಟ್ಟಣದ ಸುತ್ತಮುತ್ತ ಫೆ. ೬ ರಿಂದ ಚಿತ್ರೀಕರಣ ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದರು.
ನಂತರ ಮಾತನಾಡಿದ ಚಿತ್ರದ ನಿರ್ಮಾಪಕ ಹಾಗೂ ನಾಯಕ ಬುಲೆಟ್ ರಾಜು, ನಾನು ಐದಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ.ನಿರ್ಮಾಪಕನಾಗಿ ಇದು ಎರಡನೇ ಚಿತ್ರ. ಮೊದಲ ನಿರ್ಮಾಣದ “ಭಿಕ್ಷುಕ” ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆ. ಯತಿರಾಜ್ ಆ ಚಿತ್ರದಲ್ಲಿ ಇನ್‌ಸ್ಪೆಕ್ಟರ್ ಪಾತ್ರ ಮಾಡಿದ್ದರು. ನಂತರ ಅವರ ನಿರ್ದೇಶನದ ಚಿತ್ರವೊಂದರಲ್ಲಿ ನಾನು ಅಭಿನಯಿಸಿದ್ದೆ ಎಂದು ಹೇಳಿದರು.
ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕಿ ಸಂಜನಾ ನಾಯ್ಡು ಹೇಳಿದರು.
ಮತ್ತೊಬ್ಬ ನಟಿ ತೇಜಸ್ವಿನಿ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
ಪೊಲೀಸ್(ಪಿ ಸಿ) ಪಾತ್ರದಲ್ಲಿ ಅಭಿನಯಿಸುತ್ತಿರುವುದಾಗಿ ಕುರಿಬಾಂಡ್ ರಂಗ ಹೇಳಿದರು.
ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ವಿ.ಮನೋಹರ್, ಸಾಹಸ ಸನ್ನಿವೇಶಗಳ ಕುರಿತು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಹಾಗೂ ನೃತ್ಯ ನಿರ್ದೇಶನದ ಬಗ್ಗೆ ಫೈವ್ ಸ್ಟಾರ್ ಗಣೇಶ್ ಮಾತನಾಡಿದರು.
ಶ್ರೀಮತಿ ಯಶೋಧ ರಾಜ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿದ್ಯಾ ನಾಗೇಶ್ ಅವರ ಛಾಯಾಗ್ರಹಣವಿದೆ.